ಗೋಣಿಕೊಪ್ಪಲು, ಡಿ. 4: ಭಾರೀ ಮಳೆಯಿಂದ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ತೀರ್ವ ತೊಡಕಾಗಿದ್ದ ಗೋಣಿಕೊಪ್ಪ-ಪೊನ್ನಂಪೇಟೆ ಮುಖ್ಯ ರಸ್ತೆಗೆ ಇದೀಗ ದುರಸ್ತಿ ಭಾಗ್ಯ ದೊರಕಿದೆ. ಸುಮಾರು 200 ಮೀಟರ್ ರಸ್ತೆ ದುರಸ್ತ್ತಿಗೊಂಡಿದ್ದು ವಾಹನ ಸವಾರರು, ಪಾದಚಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ತಿಂಗಳಿನಿಂದ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸವಾರರು ಪರದಾಡುತ್ತಿದ್ದರು. ಹಲವು ಬಾರಿ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಚೇಂಬರ್ ಆಫ್ ಕಾಮರ್ಸ್ ರಸ್ತೆ ಸರಿಪಡಿಸುವಂತೆ ಪ್ರತಿಭಟನೆ ನಡೆಸಿ, ಇಲಾಖೆಯ ವಿರುದ್ಧ ಆಕ್ರೋಷಗೊಂಡಿದ್ದರು.

ಗುಂಡಿಬಿದ್ದು ಧೂಳಿನಿಂದ ಕೂಡಿದ್ದ ರಸ್ತೆಯಿಂದ ವರ್ತಕರು ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿದ್ದರು. ಇದೀಗ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ. ವಿ.ಆರ್.ಎಂ. ಕನ್ಸ್ಟ್ರಕ್ಷನ್ ಮಾಲೀಕ ಎ.ಆರ್. ವೇಣುಗೋಪಾಲ್ ಕಾಮಗಾರಿ ಕೆಲಸ ನಿರ್ವಹಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸಣ್ಣುವಂಡ ನವೀನ್ ಎಇಇ ಸುರೇಶ್ ಕಾಮಗಾರಿ ಗುಣಮಟ್ಟದ ಪರಿಶೀಲನೆ ನಡೆಸಿದರು. ರಸ್ತೆ ಕಾಮಗಾರಿಕೆಯಿಂದಾಗಿ ಮುಂಜಾನೆಯಿಂದಲೇ ವಾಹನ ಸಂಚಾರಕ್ಕೆ ತೊಡಕಾಗಿತ್ತು. ವಾಹನಗಳನ್ನು ಬೈಪಾಸ್ ರಸ್ತೆ ಮಾರ್ಗವಾಗಿ ಸಂಚರಿಸಲು ಪೊಲೀಸರು ಅನುವುಮಾಡಿಕೊಟ್ಟರು.