ಸಿದ್ದಾಪುರ, ಡಿ. 4: ನೆಲ್ಲಿಹುದಿಕೇರಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದ ವತಿಯಿಂದ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಡಿನೆಲ್ಲೆಡೆ ಒಂದು ತಿಂಗಳ ಕಾಲ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕನ್ನಡ ನಾಡು, ನುಡಿ, ರಕ್ಷಣೆಗೆ ನಾವೆಲ್ಲ ಪಣ ತೊಡಬೇಕಾಗಿದೆ. ಆಂಗ್ಲ ವ್ಯಾಮೋಹದಿಂದ ಕನ್ನಡ ಕಲಿಕೆ ದೂರವಾಗುತ್ತಿದ್ದು ಮಕ್ಕಳು ಕನ್ನಡ ಜ್ಞಾನ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಶಾಲಾ ಮುಖ್ಯ ಶಿಕ್ಷಕಿ ಪ್ರೇಮಕುಮಾರಿ ಮಾತನಾಡಿ, ಕನ್ನಡ ಭಾಷೆಯೊಂದಿಗೆ ಕನ್ನಡ ಪ್ರೇಮವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಂಗವಾಗಿ ಕನ್ನಡ ಕವನ ವಾಚನ ಕನ್ನಡ ಓದು ಬರಹ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಿದ್ದಾಪುರ ಸುತ್ತಮುತ್ತಲ ವಿವಿಧ ಶಾಲಾ ವಿದ್ಯಾರ್ಥಿಗಳು ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಲಾವಿದ ಬಾವಾ ಮಾಲ್ದಾರೆ ರಚಿಸಿದ ವಿವೇಕಾನಂದರ ಚಿತ್ರವನ್ನು ಉದಾರವಾಗಿ ಶಾಲೆಗೆ ನೀಡಿದರು. ರಕ್ಷಣಾ ವೇದಿಕೆ ಸ್ಥಳೀಯ ಅಧ್ಯಕ್ಷ ಟಿ. ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ್, ತಂಗಮ್ಮ, ರಾಬಿಯ ಭಾವ ಮತ್ತಿತರರು ಉಪಸ್ಥಿತರಿದ್ದರು.