ಬೆಂಗಳೂರು, ಡಿ. 4: ರೈತರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ 50 ಸಾವಿರ ರೂಪಾಯಿ ವರೆಗಿನ ಸಾಲಮನ್ನಾ ಮಾಡುವದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿ.ಎಂ., ಸರಕಾರಕ್ಕೆ ಆರ್ಥಿಕ ಕೊರತೆ ಇಲ್ಲ. ಸಾಲ ಮನ್ನಾಕ್ಕಾಗಿ 6,500 ಕೋಟಿ ರೂ. ಮೀಸಲಿಟ್ಟಿದ್ದೇವೆ. ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿನ 17 ಲಕ್ಷ ರೈತರ 50 ಸಾವಿರದವರೆಗಿನ ಸಾಲಮನ್ನಾ ಆಗಲಿದೆ ಎಂದರು.

ತಾ. 8 ರಿಂದ ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸಹಕಾರಿ ಬ್ಯಾಂಕ್‍ಗಳಿಗೆ ನ. 30ರ ವರೆಗಿನ 1,300 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಡಿಸೆಂಬರ್‍ನಲ್ಲಿ 1,200 ಕೋಟಿ ರೂ. ಬಿಡುಗಡೆ ಮಾಡಲು ತಯಾರಾಗಿದ್ದೇವೆ. ಕೇಂದ್ರ ಕೊಡಲಿ, ಬಿಡಲಿ ನಾವು ಸಾಲಮನ್ನಾ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.

ಸಾಲಮನ್ನಾಗೆ ಈಗಾಗಲೇ ಅಧಿಕಾರಿಗಳಿಗೂ ಆದೇಶಿಸಿದ್ದೇನೆ. ಮೊದಲ ಹಂತದಲ್ಲಿ ಜನವರಿಯಲ್ಲಿ 50 ಸಾವಿರ ಸಾಲಮನ್ನಾ ಆಗಲಿದೆ ಎಂದರು.