ಮಡಿಕೇರಿ, ಡಿ.4: ಪ್ರಕೃತಿ ವಿಕೋಪದಡಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆÉ ತಮಗೆ ಬೇಕಾದ ಸ್ಥಳದಲ್ಲಿ ಮನೆ ಗುರುತಿಸಿಕೊಳ್ಳಲು ಮುಕ್ತ ಅವಕಾಶ ನೀಡಲಾಗಿದ್ದು, ಈ ಕಾರಣಕ್ಕಾಗಿ ಸಂತ್ರಸ್ತರ ಅಭಿಪ್ರಾಯ ಹಾಗೂ ಅಹವಾಲು ಸ್ವೀಕರಿಸುವ ನಿಟ್ಟಿನಲ್ಲಿ ಕಾವೇರಿ ಕಲಾಕ್ಷೇತ್ರದಲ್ಲಿ ವಿಶೇಷ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಸಮ್ಮುಖದಲ್ಲಿ ಸಭೆ ಏರ್ಪಡಿಸಲಾಗಿತ್ತು.ಹಲವಾರು ನಿರಾಶ್ರಿತರು ಬೆಳಗ್ಗಿನಿಂದಲೇ ಟೌನ್ ಹಾಲ್ ಮುಂಭಾಗ ಕಾಯುತ್ತಾ ಕುಳಿತಿದ್ದರು. ಆದರೆ ನಿಗದಿ ಪಡಿಸಿದ್ದ ಸಮಯ ಕಳೆದರೂ ಕೂಡ ಅಧಿಕಾರಿಗಳು ಸಭೆಗೆ ಆಗಮಿಸಿರಲಿಲ್ಲ. ಮಧ್ಯಾಹ್ನದ ಊಟವೂ ಇಲ್ಲದೆ ಅಧಿಕಾರಿಗಳ ಆಗಮನಕ್ಕಾಗಿ ಕಾದ ಸಂತ್ರಸ್ತರು ಅದಾಗಲೇ ಕೋಪಗೊಂಡಿದ್ದರು. 3.45ರ ವೇಳೆಗೆ ನಿರಾಶ್ರಿತರ ತಾಳ್ಮೆಯ ಕಟ್ಟೆ ಒಡೆಯಿತು. ತಮ್ಮ ಸಹನೆಯನ್ನು ಪರೀಕ್ಷಿಸುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಮಂಗೇರಿರ ಮುತ್ತಣ್ಣ ಸರ್ಕಲ್ ಬಳಿ ರಸ್ತೆಯಲ್ಲೇ ಕುಳಿತು ಕೆಲವರು ಪ್ರತಿಭಟನೆ ಮಾಡಿ ದರು. ಸ್ಥಳದಲ್ಲೇ ಇದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಪರಿಸ್ಥಿತಿ ತಿಳಿಗೊಳಿಸಿದರು.

(ಮೊದಲ ಪುಟದಿಂದ) ಅಷ್ಟೊತ್ತಿಗಾಗಲೇ ವಿಶೇಷ ಜಿಲ್ಲಾಧಿಕಾರಿ ಜಗದೀಶ್ ಸಭೆಗೆ ಆಗಮಿಸಿದ್ದರು. ದೂರದ ಊರಿನಿಂದ ಬಂದಿದ್ದ ಸಂತ್ರಸ್ತರನ್ನು ಸಂಜೆವರೆಗೂ ಕಾಯಿಸಿದ ಕಾರಣ ಸಂತ್ರಸ್ತರು ತರಾಟೆಗೆ ತೆಗೆದುಕೊಂಡರು. ತಡವಾದ ಬಗ್ಗೆ ಕಾರಣ ತಿಳಿಸಿ ಸಭೆಯ ಮುಂದೆ ಕ್ಷಮೆ ಕೇಳಿದರೂ ಕೂಡ ಯಾರೂ ಒಪ್ಪಲು ತಯಾರಿರಲಿಲ್ಲ. ನಿರಾಶ್ರಿತರ ಬಗ್ಗೆ ಅಧಿಕಾರಿಗಳಿಗೆ ಕಾಳಜಿ, ಜವಾಬ್ದಾರಿ ಇಲ್ಲವೆಂದು ಸಭೆಯಲ್ಲಿ ಆರೋಪಗಳು ಕೇಳಿ ಬಂದವು.

ಸಂತ್ರಸ್ತರನ್ನು ಸಮಾಧಾನ ಪಡಿಸಿದ ಜಗದೀಶ್ ಅವರು, ಸಭೆ ಕರೆದ ಉದ್ದೇಶ ತಿಳಿಸಿದರು. ಸಂತ್ರಸ್ತರು ತಮ್ಮ ಮೂಲ ಸ್ಥಳಕ್ಕೆ ಸಮೀಪ ವಾಗುವಂತಹ ಜಾಗದಲ್ಲಿ ಮನೆ ನಿರ್ಮಿಸಿಕೊಡುವಂತೆ ಒತ್ತಾಯ ಹೇರಿದರು. ಕರ್ಣಂಗೇರಿ, ಗಾಳಿಬೀಡು, ಸಂಪಾಜೆ, ಮದೆ, ಜಂಬೂರು ಹಾಗೂ ಬಿಳಿಗೇರಿ ಗ್ರಾಮಗಳಲ್ಲಿ ಸ್ಥಳ ಗುರುತಿಸಲಾಗಿದೆ. ಕೊಡಗಿಗೆ ವಿಶೇಷ ಪ್ಯಾಕೇಜ್‍ನಂತೆ ಪ್ರತಿ ಕುಟುಂಬಕ್ಕೆ ಸುಮಾರು 9.85 ಲಕ್ಷ ವೆಚ್ಚದ 2 ಬೆಡ್ ರೂಂಗಳಿರುವ ಉತ್ತಮ ತಂತ್ರಜ್ಞಾನವನ್ನು ಬಳಸಿ ಮನೆ ನಿರ್ಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭ ಸಂತ್ರಸ್ತರಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ ಕಲ್ಪಿಸಿಕೊಡಲಾಯಿತು. ನಿರಾಶ್ರಿತರು 5 ಸೆಂಟ್ ಜಾಗದಲ್ಲಿ ವಾಸಕ್ಕೆ ಯೋಗ್ಯ ವಾದ ಮನೆ ನಿರ್ಮಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಅವರು ರಾಜ್ಯ ಸರ್ಕಾರದ ನಿರ್ದೇಶನದಂತೆ ತಾವು ನಡೆದು ಕೊಳ್ಳಬೇಕಿದೆ ಎಂದರು. ತೋಟ ಕಳೆದುಕೊಂಡವರಿಗೆ 2 ಹೆಕ್ಟೇರಿಗೆ 37 ಸಾವಿರದಂತೆ ನೀಡಲಾಗುವದು. ಆದರೆ ಇನ್ನೂ ಪರಿಹಾರದ ಹಣ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ತಹಶೀಲ್ದಾರ್ ಕುಸುಮ ಹಾಜರಿದ್ದರು.