ಕೂಡಿಗೆ, ಡಿ. 5: ಸಂಸದರ ಆದರ್ಶ ಗ್ರಾಮ ಯೋಜನೆಯ ಎರಡನೇ ಹಂತದಲ್ಲಿ ಕೂಡಿಗೆ ಗ್ರಾ.ಪಂ. ಆಯ್ಕೆಗೊಂಡಿದ್ದು, ಇದರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆಯ ವರದಿಯನ್ನು ತಯಾರಿಸಲು ಸಂಸದ ಪ್ರತಾಪಸಿಂಹ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯು ಕೂಡಿಗೆಯ ಕಾರ್ಪೊರೇಷನ್ ಬ್ಯಾಂಕ್ ತರಬೇತಿ ಕೇಂದ್ರದ ಆವರಣದಲ್ಲಿ ನಡೆಯಿತು. ಕೂಡಿಗೆ ಗ್ರಾ.ಪಂ ಗೆ ಸಂಬಂಧಿಸಿದಂತೆ ವಿವಿಧ ಪ್ರಗತಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕೈಜೋಡಿಸಿ ಅಭಿವೃದ್ಧಿಪಡಿಸಬೇಕೆಂದು ಸಂಸದ ಪ್ರತಾಪಸಿಂಹ ಹೇಳಿದರು. ಸಂಸದರು ಅಧಿಕಾರಿಗಳಿಂದ ವಿವಿಧ ಇಲಾಖೆಯ ಮಾಹಿತಿಯನ್ನು ಪಡೆದು ನಂತರ ಇಲಾಖಾ ವತಿಯಿಂದ ಬರುವ ಯೋಜನೆಗಳನ್ನು ಆದರ್ಶ ಗ್ರಾಮ ಯೋಜನೆಗೆ ಸದ್ಬಳಕೆ ಮಾಡಲು ಸೂಚಿಸಿದರು.

ಕೂಡಿಗೆ ಗ್ರಾ.ಪಂ. ವ್ಯಾಪ್ತಿಯು ಎಂಟು ಗ್ರಾಮಗಳಲ್ಲಿ ವಸತಿ ರಹಿತ, ಗ್ಯಾಸ್, ಚರಂಡಿ, ಸ್ಮಶಾನ, ಕಸವಿಲೇವಾರಿ ಘಟಕ, ಶಾಲಾ ತಡೆಗೋಡೆ ಸೇರಿದಂತೆ ಗ್ರಾಮಾಭಿವೃದ್ಧಿಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ರೈತರಿಗೆ ಹೈನುಗಾರಿಕೆಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಬ್ಯಾಂಕುಗಳಿಂದ ಸಾಲ ಸೌಲಭ್ಯವನ್ನು ಒದಗಿಸುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕನ್ನಡ ಬಾರದ ಅಧಿಕಾರಿಗಳಿಗೆ ವರ್ಷಕ್ಕೊಮ್ಮೆ ಕನ್ನಡ ಪರೀಕ್ಷೆ ನಡೆಸಿ, ಕನ್ನಡದಲ್ಲಿ ಮಾತನಾಡಿ ಗ್ರಾಹಕರಿಗೆ ಸ್ಪಂದಿಸುವಂತೆ ಸೂಚಿಸಿದರು. ಸಂಸದರ ಆದರ್ಶ ಗ್ರಾಮ ಯೋಜನೆ ಬರೀ ಕಲ್ಪನೆಯಾಗದೇ ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ ಎಂದರು. ನಂತರ ಮುಂದಿನ ಸಭೆಯ ಒಳಗೆ ಅಧಿಕಾರಿಗಳು ಆದರ್ಶ ಗ್ರಾಮ ಯೋಜನೆಗೆ ಅವರವರ ಇಲಾಖೆಯಿಂದ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಮತ್ತು ಅಭಿವೃದ್ಧಿ ಪಡಿಸಲು ಸಾಧ್ಯವಾಗುವ ಕ್ರಿಯಾಯೋಜನೆಯ ಪಟ್ಟಿಯನ್ನು ನೀಡುವಂತೆ ತಿಳಿಸಿದರು. ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಶ್ರೀವಿಧ್ಯಾ ಮಾತನಾಡಿ, ಜಿಲ್ಲೆಯಲ್ಲಿ ಸಂಸದ ಆದರ್ಶ ಗ್ರಾಮ ಯೋಜನೆಯ ಮೂಲಕ ಗ್ರಾಮಾಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲು ಎಲ್ಲಾ ಇಲಾಖೆಯವರು ಸ್ಪಂದಿಸುವದರ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಸಭೆಯಲ್ಲಿದ್ದ ಅಧಿಕಾರಿಗಳಿಗೆ ಅವರವರ ಇಲಾಖೆಯ ಮಾಹಿತಿಗನುಗುಣವಾಗಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ರೇಷ್ಮೆ, ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ ಹಾಗೂ ಮುಂತಾದ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭ ವೇದಿಕೆಯಲ್ಲಿ ಜಿ.ಪಂ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿಪ್ರಿಯ, ಜಿ.ಪಂ ಸದಸ್ಯ ಶ್ರೀನಿವಾಸ್, ಮಂಜುಳಾ, ತಾ.ಪಂ. ಸದಸ್ಯೆ ಸಬಿತಾ ಚೆನ್ನಕೇಶವ, ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಭೀಮಸೇನಾ ಆದರ್ಶ ಗ್ರಾಮ ಯೋಜನೆಯ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.