ಸಿದ್ದಾಪುರ, ಡಿ. 5: ಗುಹ್ಯ ಗ್ರಾಮದ ಕಕ್ಕಟ್ಟುಕಾಡು ರಸ್ತೆ ವಿವಾದವನ್ನು ಬಗೆಹರಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಬುಧವಾರದಂದು ಉಪವಿಭಾಗಾ ಧಿಕಾರಿ ಜವರೇಗೌಡ ಹಾಗೂ ಮಡಿಕೇರಿ ಡಿ.ವೈ.ಎಸ್ಪಿ. ಸುಂದರ್‍ರಾಜ್ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಸಲಾಯಿತು.ಗುಹ್ಯ ಗ್ರಾಮದ ಕಕ್ಕಟ್ಟುಕಾಡು ರಸ್ತೆ ವಿವಾದವು ನ್ಯಾಯಾಲಯದಲ್ಲಿ ಇತ್ಯಾರ್ಥವಾದರೂ ರಸ್ತೆ ಸಮಸ್ಯೆಯನ್ನು ಜಿಲ್ಲಾಡಳಿತ ಬಗೆಹರಿಸಿ ಕೊಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ವಾಸಿಸುವ 35ಕ್ಕೂ ಅಧಿಕ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ಬಹುತೇಕ ಬಡ ವರ್ಗದ ಮಂದಿ ಈ ಭಾಗದಲ್ಲಿ ವಾಸವಿದ್ದು ಸಮರ್ಪಕ ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಹಲವಾರು ರಸ್ತೆಯನ್ನು ಜಿಲ್ಲಾಡಳಿತ ಒದಗಿಸಿಕೊಡದಿದ್ದಲ್ಲಿ ತಾ.7ರಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಕಕ್ಕಟ್ಟುಕಾಡು ಗ್ರಾಮಸ್ಥರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಮಡಿಕೇರಿಯಲ್ಲಿ ಪ್ರತಿಭಟನೆಯನ್ನು ನಡೆಸುವದಾಗಿ ಗ್ರಾಮಸ್ಥರು ಪತ್ರಿಕಾ ಹೇಳಿಕೆಯನ್ನು ನೀಡಿ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಬುಧವಾರದಂದು ಜಿಲ್ಲಾ ಉಪವಿ ಭಾಗಾಧಿಕಾರಿ ಜವರೇಗೌಡ ಹಾಗೂ ಮಡಿಕೇರಿ

(ಮೊದಲ ಪುಟದಿಂದ) ಡಿ.ವೈ.ಎಸ್ಪಿ. ಸುಂದರ್‍ರಾಜ್ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಸಿತು. ಈ ಸಂದರ್ಭದಲ್ಲಿ ಅಗಸ್ತ್ಯೇಶ್ವರ ದೇವಾಲಯ ಸಮಿತಿಯ ಪದಾಧಿಕಾರಿಗಳು ಸರ್ವೆ ಕಾರ್ಯ ಮುಂಚಿತ ಎಸಿಯವರೊಂದಿಗೆ ಮಾತನಾಡಿ ತಮಗೆ ಯಾವದೇ ನೋಟಿಸ್ ಜಾರಿ ಮಾಡದೆ ಏಕಾಏಕಿ ಸರ್ವೆ ಕಾರ್ಯ ನಡೆಸುವದು ಸರಿಯಾದ ಕ್ರಮವಲ್ಲವೆಂದು ಆಕ್ಷೇಪಣೆ ವ್ಯಕ್ತ ಪಡಿಸಿದರು.

ಈ ಸಂದರ್ಭ ಉಪವಿಭಾಗಾಧಿಕಾರಿ ಜವರೇಗೌಡ ಮಾತನಾಡಿ ತಾವು ಕೈಗೊಂಡಿದುವ ಸರ್ವೆ ಕಾರ್ಯವು ಯಾರಿಗೂ ತೊಂದರೆ ನೀಡುವ ಉದ್ದೇಶದಿಂದ ಕೈಗೊಂಡಿಲ್ಲ. ಸರಕಾರಿ ಜಾಗವನ್ನು ಸರ್ವೆ ಕಾರ್ಯ ನಡೆಸಲು ಯಾವದೇ ನೋಟಿಸ್ ಜಾರಿ ಮಾಡುವ ಅಗತ್ಯವಿಲ್ಲವೆಂದು ದೇವಾಲಯದ ಪದಾಧಿಕಾರಿಗಳಿಗೆ ಪ್ರತಿಕ್ರಿಯೆ ನೀಡಿದರು.

ಸರ್ವೆ ಕಾರ್ಯವು ಬಿಗಿ ಪೋಲಿಸ್ ಬಂದೋಬಸ್ತ್ ನಡುವೆ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಿತು. ಈ ಸಂದರ್ಭ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಸರ್ವೆ ಇಲಾಖೆಯ ಮುಖ್ಯಾಧಿಕಾರಿ ಶ್ರೀನಿವಾಸ್, ಮಡಿಕೇರಿ ವಿಭಾಗದ ವೃತನಿರೀಕ್ಷಕ ಅನೂಪ್ ಮಾದಪ್ಪ, ಕಂದಾಯ ಪರಿವೀಕ್ಷಕ ವಿನು ಹಾಗೂ ಕಂದಾಯ ಇಲಾಖಾಧಿಕಾರಿಗಳು ಸರ್ವೆ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.