ಚೆಟ್ಟಳ್ಳಿ, ಡಿ. 5: ಕರ್ನಾಟಕ ಸರಕಾರದ ವಿಧಾನ ಸಭೆ ಸಚಿವಾಲಯದ ನೌಕರರಿಂದ ಕೊಡಗಿನಲ್ಲಿ ಸಂಭವಿಸಿದ ಮಹಾ ಮಳೆಗೆ ತುತ್ತಾಗಿ ಬದುಕನ್ನು ಕಳೆದುಕೊಂಡಿದ್ದ ಅಂಗವಿಕಲ ಸಂಸಾರವೊಂದನ್ನು ಗುರುತಿಸಿ ಬೆಂಗಳೂರಿಗೆ ಕರೆಯಿಸಿ ಅವರನ್ನು ತಮ್ಮ ರಾಜ್ಯೋತ್ಸವ ಕಾರ್ಯಕ್ರಮದಡಿ ಗೌರವಿಸಿ ತಾವು ಸಂಗ್ರಹಿಸಿದ ನೆರವಿನ ಮೊತ್ತವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಕರ್ನಾಟಕ ಸರಕಾರದ ನೌಕರರು ತಾವು ಕಟ್ಟಿಕೊಂಡ ಕೆ.ಜಿ.ಎಸ್. ಯುವ ಬ್ರಿಗೇಡ್ ಅನ್ನುವ ಹೆಸರಿನಡಿ ಪ್ರತಿ ವರ್ಷ ಯಾರಾದರೂ ಕಷ್ಟದಲ್ಲಿ ಇರುವರನ್ನು ಗುರುತಿಸಿ ಸಹಾಯ ಮಾಡುತ್ತ ಬಂದಿದ್ದಾರೆ. ಹಾಗೆಯೇ ಈ ವರ್ಷವೂ ಕೊಡಗಿನ ಪ್ರಕೃತಿ ವಿಕೋಪಕೆ ಸಿಲುಕಿ ನೆಲೆಯನ್ನು ಕಳೆದು ಕೊಂಡವರಿಗೆ ಸಹಾಯವನ್ನು ಮಾಡಬೇಕೆಂದು ತೀರ್ಮಾನಿಸಿ ಇವರನ್ನು ಆಯ್ಕೆ ಮಾಡಿದ್ದಾರೆ.

ಚಾಮೇರಾ ನಾಣಯ್ಯ ಅವರು ತನ್ನ ಎರಡು ಕಾಲಿನ ಸ್ವಾಧೀನವನ್ನು ಕಳೆದುಕೊಂಡು ಹುಟ್ಟುತ್ತಲೇ ಅಂಗವಿಕಲರಾಗಿರುತ್ತಾರೆ. ತೀರಾ ಬಡತನದಲ್ಲಿ ಬೆಳೆದು ಯಾರನ್ನು ಬೇಡದೆ ಸ್ವಾಭಿಮಾನದಲ್ಲಿ ಜೀವನ ಮಾಡುವದಕ್ಕೆ ತೀರ್ಮಾನಿಸಿ ತನ್ನ ಮೂರು ಸೆಂಟಿನ ಜಾಗದಲ್ಲಿ ಇರುವ ಒಂದು ಪುಟ್ಟ ಶೀಟಿನ ಮನೆಯೊಂದನ್ನು ಕಷ್ಟಪಟ್ಟು ನಿರ್ಮಿಸಿರುತ್ತಾರೆ. ಅದರ ಬದಿಯಲ್ಲಿ ದೊರೆತ ಅಂಗವಿಕಲರ ಕಲ್ಯಾಣ ಇಲಾಖೆಯ ಗೂಡಂಗಡಿಯನ್ನು ಪ್ರಾರಂಭಿಸಿರುತ್ತಾರೆ.

ಅದೇ ಮನೆಯ ಹಿಂಬದಿಯ ಎರಡು ಕೋಣೆಯನ್ನು ತಮ್ಮ ಜೀವನ ನಿರ್ವಹಣೆಯ ಸಲುವಾಗಿ ಮಾಸಿಕ ಸಾವಿರ ರೂಪಾಯಿಯಂತೆ ಬಾಡಿಗೆ ನೀಡುತ್ತಾರೆ. ಅವರ ಹೆಂಡತಿಯು ಅಂಗವಿಕಲರಾಗಿದ್ದು ತಾವು ಸುಮ್ಮನಿರದೆ ಗಂಡನಿಗೆ ನೆರವಾಗಲು ಕಳೆದ ಮೂರುವರ್ಷದಿಂದ ಮಡಿಕೇರಿಯ ಮನೆಯೊಂದರಲ್ಲಿ ಮನೆಕೆಲಸಕ್ಕೆ ಸೇರಿ ತಿಂಗಳಿಗೆ ಮೂರು ಸಾವಿರ ರೂಪಾಯಿಯವರೆಗೂ ಸಂಪಾದಿಸುತ್ತಿದ್ದರು.

ತಮಗೆ ಇರುವ ಒಬ್ಬಳೇ ಮಗಳು ಕೆ. ನಿಡುಗಣೆಯ ಸರಕಾರಿ ಶಾಲೆಯೊಂದರಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ತೀರಾ ಅಂಗವಿಕಲನಾಗಿ ಯಾರಲ್ಲೂ ಕೈ ಚಾಚದೆ ಸ್ವಾಭಿಮಾನದ ಜೀವನ ನಡೆಸುತ್ತಿದ್ದ ಚಾಮೇರಾ ನಾಣಯ್ಯ ಅವರಿಗೆ ಈ ವರ್ಷದ ಆಗಸ್ಟ್‍ನ ಮಹಾಮಳೆಯು ಅವರ ಅಂಗಡಿ ಮನೆಯನ್ನು ತನ್ನ ಒಡಲೊಳಗೆ ಸೇರಿಸಿ ಅವರ ಸಂಸಾರವನ್ನು ಬೀದಿಗೆ ನಿಲ್ಲಿಸಿತ್ತು.