(ವಿಶೇಷ ವರದಿ: ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಡಿ.5 : ಅರಣ್ಯ ಇಲಾಖೆಯ ಸುತ್ತೋಲೆಗಳಿಂದ ಕಾಫಿ ಬೆಳೆಗಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇರುವ ಅಲ್ಪ ಸ್ವಲ್ಪ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದ ಕಾಫಿ ಬೆಳೆಗಾರರು ಇದೀಗ ಅರಣ್ಯ ಇಲಾಖೆಯ ಸುತ್ತೋಲೆಗಳಿಂದ ನೆಮ್ಮದಿ ಕಳೆದುಕೊಂಡಂತಾಗಿದೆ. ಐಷಾರಾಮಿ ಕಟ್ಟಡದ ಎಸಿ ರೂಂನಲ್ಲಿ ಕುಳಿತುಕೊಂಡು ಕೆಲಸ ನಿರ್ವಹಿಸುವ ಇಲಾಖೆಯ ಹಿರಿಯ ಅಧಿಕಾರಿಗಳು ಅರಣ್ಯವನ್ನು ಉಳಿಸುವ ನೆಪದಲ್ಲಿ ಬಡಜನತೆಯ ಮೇಲೆ ಒಂದಾದ ನಂತರ ಒಂದು ಸುತ್ತೋಲೆಗಳನ್ನು ಹೊರಡಿಸುವ ಮೂಲಕ ಇವರ ಬದುಕನ್ನು ಕಸಿದುಕೊಳ್ಳಲು ಮುಂದಾಗಿದೆ. ಈ ಸುತ್ತೋಲೆಗಳಿಗೆ ಕಡಿವಾಣ ಹಾಕದಿದ್ದಲ್ಲಿ ದ.ಕೊಡಗಿನ ಹಲವಾರು ಕಾಫಿ ಬೆಳೆಗಾರರ ಕುಟುಂಬಗಳು ಬೀದಿಗೆ ಬರುವದರಲ್ಲಿ ಸಂಶಯವಿಲ್ಲ.ವನ್ಯ ಜೀವಿಗಳ ಉಪಟಳದಿಂದ ತಾನು ಬೆಳೆದ ಕಾಫಿ, ಕರಿಮೆಣಸು, ಭತ್ತದ ಬೆಳೆಗಳನ್ನು, ಉಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಕೊಡಗಿನ ರೈತರು, ಬೆಳೆಗಾರರು ಹೆಣಗಾಡುತ್ತಿದ್ದಾರೆ. ರಾತ್ರಿಯಿಡೀ ಕಾದುಕುಳಿತು ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವದೇ ದೊಡ್ಡ ಕೆಲಸ ಆದರೂ ಮುಂಜಾನೆ ವೇಳೆಯಲ್ಲಿ ತೋಟ, ಗದ್ದೆಗಳಿಗೆ ಲಗ್ಗೆಯಿಡುವ ಕಾಡಾನೆಗಳು ಬೆಳೆದ ಫಸಲನ್ನು ನಾಶ ಮಾಡುತ್ತಿವೆ. ಉಳಿದ ಅಲ್ಪ ಸ್ವಲ್ಪ ಬೆಳೆಗಳನ್ನು ಕಾಪಾಡಿಕೊಂಡು ಇದರಲ್ಲಿ ಬರುವ ವಾರ್ಷಿಕ ಆದಾಯವನ್ನು ತನ್ನ ಕಾರ್ಮಿಕರಿಗೆ, ರಸಗೊಬ್ಬರಗಳಿಗೆ ನೀಡಿ ಉಳಿದ ಆದಾಯದಲ್ಲಿ ಬದುಕು ಸವೆಸುತ್ತಾ ಸಾಗುತ್ತಿದೆ.

ಇತ್ತ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿರುವ ಸಮಯದಲ್ಲಿ ಕಷ್ಟಪಟ್ಟು ಕಾಫಿ ತೋಟವನ್ನು ಮಾಡಿಕೊಂಡಿರುವವರ ಮೇಲೆ ಅರಣ್ಯ ಇಲಾಖೆಯು ಸುತ್ತೋಲೆ ನೆಪದಲ್ಲಿ ಕಾಫಿ ಬೆಳೆಗಾರರ ಮೇಲೆ ಗಧಾಪ್ರಹಾರ ಮಾಡಲು ಹೊರಟಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕಾಫಿ ತೋಟಗಳನ್ನು ಮಾಡಿಕೊಂಡು ಬಂದಿರುವ ರೈತರಿಗೆ ಅರಣ್ಯ ಒತ್ತುವರಿ ನೆಪದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಕಾಫಿ ಬೆಳೆಗಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಈ ಸುತ್ತೋಲೆಗಳು ನಾಂದಿಯಾಡುವಂತಿವೆ.

1941ನೇ ಇಸವಿಯಿಂದಲೂ ಹುದಿಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೈಸೊಡ್ಲೂರು ಭಾಗದ ಸರ್ವೆ ನಂ.1/1ರಲ್ಲಿ 64ಕ್ಕೂ ಕುಟುಂಬಗಳು ಅರಣ್ಯ ಭೂಮಿಯಲ್ಲಿ ಕಾಫಿ ತೋಟಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಲೇ ಬಂದಿವೆ. ಇದನ್ನೇ ನಂಬಿಕೊಂಡು ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಎಲ್ಲವೂ ನಿಂತಿವೆ. 230 ಎಕರೆ ಭೂಮಿಯು ಪ್ರಸ್ತುತ ಇಲ್ಲಿನ 64 ರೈತರ ಸ್ವಾಧೀನದಲ್ಲಿದೆ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕರ್ನಾಟಕ ಅರಣ್ಯ ಕಾಯಿದೆ 1963 ನಿಯಮ 24(ಸಿ)ಯ ಪ್ರಕಾರ ದಿ. 18.02.2002ರಲ್ಲಿ ಕುರುಬರ ಬೋಜ, ರಾಜು, ಮರಿ ರವರ ಮೇಲೆ ಮೊಕದ್ದಮೆ ಸಂಖ್ಯೆ 50/2002-03ರಲ್ಲಿ ಕೇಸು ದಾಖಲಿಸಿದ್ದರು. ಈ ಕೇಸಿನ ಮುಂದುವರೆದ ಭಾಗವಾಗಿ ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ಇವರನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಆರಂಭದ ಟಿಪ್ಪಣಿ ಬರೆದಿದ್ದಾರೆ.

ಈ ಜಾಗದಲ್ಲಿ ವಾಸವಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ಹಾಜರುಪಡಿಸುವ ನೆಪದಲ್ಲಿ ದಾಖಲಾತಿ ಪತ್ರಗಳನ್ನು ಇಲಾಖೆಯು ಪರಿಶೀಲಿಸುವ ಪ್ರಯತ್ನಕ್ಕೆ ಮುಂದಾಗಿದೆ. ಕೇವಲ ಪರಿಶಿಷ್ಟರ ಮೂವರನ್ನು ನೆಪವಾಗಿರಿಸಿಕೊಂಡು ಹಂತ ಹಂತವಾಗಿ 230 ಎಕರೆ ಜಾಗದ ಮೇಲೆ ತನ್ನ ಹಕ್ಕನ್ನು ಸಾಧಿಸುವ ಪ್ರಯತ್ನಕ್ಕೆ ಕೈ ಹಾಕಿರುವ ಅರಣ್ಯ ಇಲಾಖೆಯು ಮುಂದೊಂದು ದಿನ ಇಲ್ಲಿಯ 64 ಕುಟುಂಬಗಳ ಮೇಲೆಯೂ ಸುತ್ತೋಲೆ ನೆಪದಲ್ಲಿ ಇವರ ಭೂಮಿಯನ್ನು ಕಸಿದುಕೊಳ್ಳುವ ಕಾರ್ಯ ನಡೆದರೂ ಅಚ್ಚರಿಯಿಲ್ಲ.

1991 ರಲ್ಲಿ ಅರಣ್ಯ ಇಲಾಖೆಯ ಸೆಕ್ಷನ್ 4ರ ಪ್ರಕಾರ ಹೈಸೊಡ್ಲೂರು ಭಾಗದ ಸರ್ವೆ ನಂ.1/1ರಲ್ಲಿ ಇರುವ 230.07ಎಕರೆ ಭೂಮಿಯು ಮೀಸಲು ಅರಣ್ಯಕ್ಕೆ ಸೇರಿರುವ ಬಗ್ಗೆ ಗೆಜೆಟ್ ನೋಟಿಫಿಕೇಶನ್‍ನಲ್ಲಿ ನಮೂದಾಗಿದೆ. ಹೈಸೊಡ್ಲೂರು ಸೇರಿದಂತೆ ಕೊಂಗಣ ಭಾಗದ ಸರ್ವೆ ನಂ 161ರಲ್ಲಿ 7.98, ಎಕರೆ, 162ರಲ್ಲಿ 158.06 ಎಕರೆ ಜಾಗವು ಮೀಸಲು ಅರಣ್ಯಕ್ಕೆ ಸೇರಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಯು ಮುಂದಾಗಿದೆ ಎಂದು ಹೇಳಲಾಗುತ್ತಿದೆ.