ಕುಶಾಲನಗರ, ಡಿ. 5: ಇಲ್ಲಿನ ಗಣಪತಿ ದೇವಸ್ಥಾನ ವಾರ್ಷಿಕ ಜಾತ್ರೆ ಅಂಗವಾಗಿ 98ನೇ ಗೋಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು. ಐತಿಹಾಸಿಕ ಪರಂಪರೆಯ ಜಾತ್ರೆ ರಥೋತ್ಸವ ಹಿನೆÀ್ನಲೆಯಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ಜಿಲ್ಲೆಗಳ ರೈತರು ವಿವಿಧ ತಳಿಯ ಜಾನುವಾರುಗಳಾದ ಜೋಡು ಎತ್ತುಗಳು, ಜರ್ಸಿ ಹಸುಗಳು, ಹೋರಿಗಳು, ಮಿಶ್ರ ತಳಿ ಜಾನುವಾರುಗಳು ಈ ಬಾರಿ ಗೋಪ್ರದರ್ಶನದಲ್ಲಿ ಪಾಲ್ಗೊಂಡಿವೆ.

ರೈತರಿಗೆ ತಮ್ಮ ಗೋವುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಈ ಬಾರಿ ಕುಶಾಲನಗರ ಗಣಪತಿ ದೇವಸ್ಥಾನ ಸೇವಾ ಸಮಿತಿ ಎಲ್ಲಾ ರೀತಿಯ ಪೂರ್ವ ತಯಾರಿ ನಡೆಸಿದೆ. ಇದರೊಂದಿಗೆ 3 ದಿನಗಳ ಕಾಲ ನಡೆಯಲಿರುವ ದನಗಳ ಜಾತ್ರೆಗೆ ಇಂದು ಅದ್ದೂರಿಯಾಗಿ ಚಾಲನೆ ದೊರೆಯಿತು.

ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ನಡೆಯುವ ಗೋಪ್ರದರ್ಶನ ಮತ್ತು ಜಾತ್ರೆ ಅಂಗವಾಗಿ ಸ್ಥಳೀಯ ಸೋಮೇಶ್ವರ ದೇವಾಲಯ ಬಳಿಯಿಂದ ಮೆರವಣಿಗೆ ಯಲ್ಲಿ ರೈತರು ತಮ್ಮ ಜಾನುವಾರು ಗಳನ್ನು ಕರೆದೊಯ್ದರು. ಮೆರವಣಿಗೆಗೂ ಮುನ್ನ ಸ್ಥಳೀಯ ಮಹಿಳಾ ಭಜನಾ ಮಂಡಳಿ ಮತ್ತು ದೇವಾಲಯ ಸಮಿತಿ ಪ್ರಮುಖರು ರಾಸುಗಳಿಗೆ ಬೆಲ್ಲ ತಿನಿಸಿ ಪೂಜೆ ಸಲ್ಲಿಸಿದರು.

ಸುತ್ತಮುತ್ತಲಿನ ನೂರಾರು ರೈತರು ಈ ಗೋ ಜಾತ್ರೆಯಲ್ಲಿ ಪಾಲ್ಗೊಂಡಿದ್ದು 3 ದಿನಗಳ ಕಾಲ ದನಗಳಿಗೆ ಬೇಕಾದ ಹುಲ್ಲು ಮತ್ತಿತರ ವ್ಯವಸ್ಥೆಯನ್ನು ಸಮಿತಿ ಕಲ್ಪಿಸಿದೆ. ಇದರೊಂದಿಗೆ ಜಾನುವಾರು ಗಳ ಮಾಲೀಕರಿಗೆ ಊಟ ತಿಂಡಿ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ವಿ.ಎನ್.ವಸಂತಕುಮಾರ್ ತಿಳಿಸಿದ್ದಾರೆ.

ಈ ಸಂದರ್ಭ ದೇವಾಲಯ ಸಮಿತಿ ಮತ್ತು ದನಗಳ ಜಾತ್ರೆ ಸಮಿತಿ ಪ್ರಮುಖರಾದ ಆರ್. ಬಾಬು, ಎಸ್.ಕೆ. ಶ್ರೀನಿವಾಸ ರಾವ್, ಜಿ.ಎಲ್. ನಾಗರಾಜ್, ಎಂ.ಕೆ. ದಿನೇಶ್, ಎಂ.ವಿ. ನಾರಾಯಣ, ವಿ.ಡಿ. ಪುಂಡರೀಕಾಕ್ಷ, ಅಮೃತ್‍ರಾಜ್ ಮತ್ತಿತರರು ಇದ್ದರು.