ಮಡಿಕೇರಿ, ಡಿ. 5: ಮೈಸೂರು, ಮಡಿಕೇರಿ ಚತುಷ್ಪಥ ಯೋಜನೆÉ ಮತ್ತು ರೈಲು ಮಾರ್ಗವನ್ನು ವಿರೋಧಿಸಿ ತಾ. 8 ರಂದು ಪರಿಸರವಾದಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿಗೆ ತಮ್ಮ ವಿರೋಧವಿದೆ ಎಂದು ತಿಳಿಸಿರುವ ಸೇವ್ ಕೊಡಗು ವೇದಿಕೆಯ ಪ್ರಮುಖರು, ಕೊಡಗಿನ ಅಭಿವೃದ್ಧಿಗೆ ಅಡ್ಡಿಯಾಗಿರುವ ಡೋಂಗಿ ಪರಿಸರವಾದಿಗಳು ಯೋಜನೆಯ ಸಾಧಕ ಬಾದಕಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಪ್ರಮುಖ ಕೆ.ಬಿ.ಮಧು ಬೋಪಣ್ಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳು ಪ್ರಜೆಗಳ ಆಶೋತ್ತರದಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಾರೆ. ಆದರೆ ಬೆರಳೆಣಿಕೆಯಷ್ಟು ಪರಿಸರ ವಾದಿಗಳು ಕೊಡಗಿನ ಐದೂವರೆ ಲಕ್ಷ ಜನರ ಪ್ರತಿನಿಧಿಗಳಂತೆ

(ಮೊದಲ ಪುಟದಿಂದ) ವರ್ತಿಸುತ್ತಾ ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರುತ್ತಿದ್ದಾರೆ ಎಂದು ಆರೋಪಿಸಿದರು. ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಲು ಹೋರಾಟ ರೂಪಿಸುವ ಬದಲು ಬಹಿರಂಗ ಚರ್ಚೆಯಲ್ಲಿ ಪಾಲ್ಗೊಂಡು ಜನಭಿಪ್ರಾಯ ಸಂಗ್ರಹಕ್ಕೆ ಮುಂದಾಗಲಿ ಎಂದು ಅವರು ಒತ್ತಾಯಿಸಿದರು.

ಮೈಸೂರು, ಮಡಿಕೇರಿ ಚತುಷ್ಪಥ ಯೋಜನೆಗೆ ಕೊಡಗಿನ ಸುಮಾರು ನಾಲ್ಕು ಲಕ್ಷ ಮರಗಳು ನಾಶವಾಗುತ್ತವೆ ಎಂದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಕೊಡಗಿನ ಕೊಡವರು, ಗೌಡರು, ಮಾಪಿಳ್ಳೆಗಳು, ಹೆಗ್ಗಡೆಗಳು, ಐರಿಗಳು, ಶೋಷಿತ ವರ್ಗದ ಕೆಂಬಟ್ಟಿಗಳು, ಯರವರು, ಕುರುಬರು ಇತರ ಪರಿಶಿಷ್ಟ ವರ್ಗದವರು, ಕೂಲಿ ಕಾರ್ಮಿಕರು ಇವರೆಲ್ಲರನ್ನು ಡೋಂಗಿ ಪರಿಸರವಾದಿಗಳು ಕಡೆಗಣಿಸಿದ್ದಾರೆ. ಒಂದೇ ವರ್ಗವನ್ನು ಎತ್ತಿಕಟ್ಟಿ ಹೋರಾಟದ ನಾಟಕವನ್ನು ರೂಪಿಸಿರುವ ಡೋಂಗಿ ಪರಿಸರವಾದಿಗಳು ಮೈಸೂರು ಹಾಗೂ ಬೆಂಗಳೂರಿನಲ್ಲಿ ಜೀವನ ಕಂಡುಕೊಂಡಿರುವ ಕೊಡಗಿನವರನ್ನು ಕರೆ ತಂದು ಪ್ರತಿಭಟನೆ ನಡೆಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ ಮಧು ಬೋಪಣ್ಣ, ಕೊಡಗಿನಲ್ಲೇ ಹುಟ್ಟಿ ಬೆಳೆದು ಜೀವನ ಸಾಗಿಸುತ್ತಿರುವ ಮಂದಿಗೆ ಇಲ್ಲಿನ ನೈಜತೆ ತಿಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೊರಗಿನಿಂದ ಬಂದು ಪ್ರತಿಭಟನೆ ಮಾಡುವವರಿಗೆ ಇಲ್ಲಿನವರ ಹಿತ ಬೇಕಾಗಿಲ್ಲ, ಹೊರಗಿನವರಿಗೆ ಕುಡಿಯುವ ನೀರು ಬೇಕು, ಕಾವೇರಿ ಉಳಿಯಬೇಕೆಂದು ಕೊಡಗಿನ ಜನರ ಹಿತವನ್ನು ಬಲಿಕೊಡಲಾಗುತ್ತಿದೆ. ಇಲ್ಲಿ ಜೀವಿಸುತ್ತಿರುವವರು ಪ್ರಾಣಿಗಳೇ ಎಂದು ಪ್ರಶ್ನಿಸಿದರು.

ಕೊಡಗಿನ ಬಾಣೆ ಸಮಸ್ಯೆಯನ್ನು ಬಗೆಹರಿಸಲು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾದ ವಿಧೇಯಕ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿದಾಗ, ರಾಜ್ಯಪಾಲರನ್ನು ಭೇಟಿಯಾಗಿ ಕೊಡಗಿನ ಬಾಣೆಗಳು ಸರಕಾರದ ಅರಣ್ಯ ಪ್ರದೇಶವೆಂದು ತಿಳಿಸಿ ವಿಧೇಯಕಕ್ಕೆ ಸಹಿ ಹಾಕದಂತೆ ಮಾಡಲಾಗಿತ್ತು. ಕೊಡವರೂ ಸೇರಿದಂತೆ ಕೊಡಗಿನ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿ ಕೊಡಗನ್ನು ಕಾಡುಪ್ರಾಣಿಗಳ ಆವಾಸ ಸ್ಥಾನವನ್ನಾಗಿ ಮಾಡುವ ಪ್ರಯತ್ನ ನಡೆದಿದೆ.

ಕಾವೇರಿ ನದಿ ರಕ್ಷಣೆ ಬಗ್ಗೆ ಮತ್ತು ಭೂಪರಿವರ್ತನೆಯ ವಿರುದ್ದ ಮಾತನಾಡುತ್ತಿರುವ ಡೋಂಗಿ ಪರಿಸರವಾದಿಗಳಿಗೆ ಮಳೆಗಾಲದಲ್ಲಿ ಕಾಡು ಮತ್ತು ಬಾಣೆಯಿಂದ ಹರಿದ ನೀರು ಭತ್ತದ ಗದ್ದೆಗಳಲ್ಲಿ ಇಂಗಿ ಅಂತರ್ಜಲವಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲವೆ? ವೀರಾಜಪೇಟೆ ಸಮೀಪದ ಮೈತಾಡಿಯಲ್ಲಿ ಏಕರೆಗಟ್ಟಲೆ ಭತ್ತದ ಗದ್ದೆಯನ್ನು ಭೂಪರಿವರ್ತನೆ ಮಾಡಿ ಬಡಾವಣೆ ನಿರ್ಮಾಣ ಮಾಡಿರುವದು ಗೋಚರಿಸಲಿಲ್ಲವೆ ಎಂದು ಪ್ರಶ್ನಿಸಿದರು.

ಗ್ರಾಮೀಣ ರಸ್ತೆಗಳ ಅಭಿವೃಧ್ಧಿ ಸಾಕು, ಹೆದ್ದಾರಿಗಳು ಬೇಡ ಎಂದು ಗ್ರಾಮಸ್ಥರ ಬಗ್ಗೆ ಕಾಳಜಿ ತೋರುತ್ತಿರುವ ಪರಿಸರವಾದಿಗಳು ಗ್ರಾಮಸ್ಥರ ಹಲವು ದಿನಗಳ ಬೇಡಿಕೆಯಾದ ಕೂಟಿಯಾಲ ರಸ್ತೆ, ಸೇತುವೆ ಹಾಗೂ ಕಡಮಕಲ್ಲು ರಸ್ತೆ ಕಾಮಗಾರಿಗೆ ಅಡ್ಡಿಪಡಿಸಿದ್ದೇಕೆ ಎಂದು ಮಧುಬೋಪಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಪರಿಸರವಾದಿಗಳಿಗೆ ಅರಣ್ಯಾಧಿಕಾರಿಗಳ ಮೇಲೆ ಹಿಡಿತ ಇರುವದರಿಂದ ಆನೆ ಮತ್ತು ಇತರ ಕಾಡು ಪ್ರಾಣಿಗಳೂ ನಾಡಿಗೆ ಬರುವದನ್ನು ನಿಯಂತ್ರಿಸಲು ವ್ಯವಸ್ಥೆ ರೂಪಿಸಲು ಸಾಧ್ಯವಾಗುತ್ತಿಲ್ಲ. ಬಾಣೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಕಾನೂನು ತಿದ್ದುಪಡಿಗೆ ಸಹಿ ಹಾಕಿ, ಗೆಜೆಟ್‍ನಲ್ಲಿ ಬಂದ ನಂತರವೂ, ಕಾನೂನು ತಿದ್ದುಪಡಿಯನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಕಂದಾಯ ಅಧಿಕಾರಿಗಳನ್ನು ಕೂಡ ಡೋಂಗಿ ಪರಿಸರವಾದಿಗಳು ಹಿಡಿತದಲ್ಲಿಟ್ಟ ಕೊಂಡಿರುವದು ಎಂದು ಮಧುಬೋಪಣ್ಣ ಆರೋಪಿಸಿದರು.

ಇದೇ ಕಾರಣಕ್ಕೆ ಕೊಡಗಿನ ಕೋವಿ ಹಕ್ಕಿಗೂ ಅಡ್ಡಿಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಒಂದೇ ಜಾತಿಗೆ ಸೇರಿದ ಅವರು ಕೊಡಗಿನಲ್ಲಿ ಜಾತಿ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಿ ಕೊಡಗಿನ ಗಡಿಯ ಹೊರಗೆ ಇರುವ 8 ಕೋಟಿ ಜನರ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿರುವದು ಯಾಕೆ ಎಂದು ಪ್ರಶ್ನಿಸಿದ ಅವರು ವೈಜ್ಞಾನಿಕ ರೂಪದಲ್ಲಿ ಸುಸಜ್ಜಿತವಾಗಿ ವಿಶಾಲವಾದ ಚತುಷ್ಪಥ ಹೆದ್ದಾರಿಗಳು ನಿರ್ಮಾಣಗೊಳ್ಳುವದರಿಂದ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗುವದಲ್ಲದೆ, ಮಣ್ಣು ಕುಸಿದರೆ ತೆರವು ಕಾರ್ಯಾಚರಣೆ ಸುಲಭವಾಗು ವದರೊಂದಿಗೆ ವಾಹನಗಳ ಸಂಚಾರಕ್ಕೂ ಹೆಚ್ಚು ಅನುಕೂಲ ವಾಗಲಿದೆ ಎಂದರು.

ಕೊಡಗಿನಲ್ಲಿ ಬೃಹತ್ ಕೈಗಾರಿಕೆ ಗಳಿಲ್ಲ, ಅಲ್ಲದೆ ಕಾಫಿ ತೋಟಗಳು ಹಚ್ಚ ಹಸಿರಾಗಿದ್ದು, ಜಿಲ್ಲೆಯ ಪರಿಸರ ರಕ್ಷಣೆ ದೇಶದಲ್ಲೇ ಅತ್ಯುತ್ತಮವಾಗಿದೆ. ಮರಗಳು ಮತ್ತು ಪರಿಸರ ಸಂಪೂರ್ಣವಾಗಿ ನಾಶವಾಗಿದೆ ಎಂದು ಅಪಪ್ರಚಾರ ಮಾಡುವ ಮೂಲಕ ವಿದೇಶಿ ಹಣದ ಲಾಭ ಪಡೆಯುವ ಹುನ್ನಾರ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಇತರ ಪ್ರಮುಖರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಪ್ರಮುಖರಾದ ಬಿ.ಟಿ. ದಿನೇಶ್, ಬಿ.ಎಂ. ಜಿನ್ನು ನಾಣಯ್ಯ, ಎನ್.ಎಸ್. ಉದಯಶಂಕರ್ ಹಾಗೂ ಮನು ಮಹೇಶ್ ಉಪಸ್ಥಿತರಿದ್ದರು.