ಸೋಮವಾರಪೇಟೆ, ಡಿ. 5: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶುಗಳಿಗೆ ಮೇವು ಒದಗಿಸುವ ಸಂಬಂಧ, ರೈತರಿಗೆ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿತರಿಸಿದರು. ಶಾಸಕರ ಕಚೇರಿಯಲ್ಲಿ ಸಾಂಕೇತಿಕವಾಗಿ 15 ಮಂದಿಗೆ ಬಿತ್ತನೆ ಬೀಜದ ಮಿನಿ ಕಿಟ್‍ಗಳನ್ನು ವಿತರಿಸಿದ ಶಾಸಕರು, ಪಶುಗಳಿಗೆ ಮೇವಿನ ಅಭಾವ ಉಂಟಾಗು ವದನ್ನು ತಡೆಯುವ ಉದ್ದೇಶದಿಂದ ಸರ್ಕಾರದ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ಅವಶ್ಯವಿರುವ ರೈತರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ. ನಾಗರಾಜ್ ಮಾತನಾಡಿ, ಇಲಾಖೆ ಮೂಲಕ 6 ಕೆ.ಜಿ. ಪ್ರಮಾಣದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ತಾಲೂಕಿಗೆ ಸಂಬಂಧಪಟ್ಟಂತೆ 1300 ಕಿಟ್‍ಗಳು ಸರ್ಕಾರದಿಂದ ಬಂದಿವೆ.

ಬಿತ್ತನೆ ಬೀಜದ ಅವಶ್ಯಕತೆ ಇರುವ ರೈತರು ತಮ್ಮ ಆರ್‍ಟಿಸಿ ಮತ್ತು ಆಧಾರ್ ಕಾರ್ಡ್ ಪ್ರತಿ ನೀಡಿ, ಸ್ಥಳೀಯ ಪಶು ವೈದ್ಯಕೀಯ ಕೇಂದ್ರ ಗಳಿಂದ ಪಡೆದು ಕೊಳ್ಳಬಹುದಾಗಿದೆ ಎಂದರು. ಈ ಸಂದರ್ಭ ಪಶುವೈದ್ಯಕೀಯ ಇಲಾಖೆಯ ಗಿರೀಶ್, ಪ್ರಮುಖರಾದ ಕೊಮಾರಪ್ಪ, ಟಿ.ಕೆ. ರಮೇಶ್, ಎಸ್.ಆರ್. ಸೋಮೇಶ್, ಜಗದೀಶ್, ಕೃಷ್ಣಪ್ಪ, ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.