ಮಡಿಕೇರಿ, ಡಿ. 5: ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡಿರುವ ಚುನಾವಣಾ ಆಯೋಗ ಈಗಾಗಲೇ ಮತಯಂತ್ರಗಳ ಗುಣಮಟ್ಟ ಪರಿಶೀಲನೆಯಲ್ಲಿ ತೊಡಗಿದೆ. ನಗರದ ಜೂನಿಯರ್ ಕಾಲೇಜು ಆವರಣದ ಶಿಕ್ಷಕರ ಭವನ ಕಟ್ಟಡದಲ್ಲಿ ಇಂದು ತಜ್ಞರು ಮತಯಂತ್ರಗಳ ಪರಿಶೀಲನೆ ನಡೆಸಿದರು.

ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯ 12 ಮಂದಿ ಮತಯಂತ್ರಗಳ ತಜ್ಞರ ನುರಿತ ತಂಡ ಈ ಕಾರ್ಯ ಆರಂಭಿಸಿದೆ. ಕಂದಾಯ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನಿರ್ದೇಶನದಲ್ಲಿ ಈ ಪರಿಶೀಲನೆಗೆ ಕೈಜೋಡಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತಯಂತ್ರಗಳ ಪರಿಶೀಲನೆ ನಡೆದಿದೆ ಎಂದು ಸಂಬಂಧಿಸಿದ ತಜ್ಞರ ತಂಡ ಸುಳಿವು ನೀಡಿದೆ. ಈ ಕೇಂದ್ರದಲ್ಲಿ ಬೆಂಗಾವಲು ಪಡೆಯ ಭದ್ರತೆ ನಡುವೆ ಕೆಲಸ ಮುಂದುವರಿದಿದೆ.