ಮಡಿಕೇರಿ, ಡಿ. 5: ತಾ. 7 ರಂದು (ನಾಳೆ) ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಾಕೃತಿಕ ವಿಕೋಪದಿಂದ ತೊಂದರೆಯಲ್ಲಿ ಸಿಲುಕಿರುವ ಸಂತ್ರಸ್ತರಿಗೆ ವಸತಿ ಯೋಜನೆ ಕಲ್ಪಿಸಲು ಆಗಮಿಸುವ ವೇಳೆ ರಾಜಕೀಯ ಸಲ್ಲದು ಎಂದು ಮೇಲ್ಮನೆ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರು, ಇದುವರೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಶಾಸಕರು ಗಳು ರಾಜಕೀಯ ಬೇಧವಿಲ್ಲದೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವಾಗ, ಕೆಲವರು ತಮ್ಮ ಬೇಳೆ ಬೇಯಿಸಿ ಕೊಳ್ಳಲು ದಿಢೀರ್ ಸಂಘಟನೆ ಹುಟ್ಟು ಹಾಕಿ ಪ್ರತಿಭಟನೆಗೆ ಮುಂದಾಗಿರುವದು ಬಾಲಿಶತನವೆಂದು ಟೀಕಿಸಿದ್ದಾರೆ.

ಈಗಾಗಲೇ ಪ್ರಾಕೃತಿಕ ವಿಕೋಪದ ಸಂದರ್ಭ ರಾಜ್ಯದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಗಳ ಸಹಿತ ಅನೇಕ ಸಚಿವರು ಭೇಟಿ ನೀಡಿ, ಜಿಲ್ಲೆಯ ಜನತೆಯ ಸಮಸ್ಯೆ ಆಲಿಸಿದ್ದು, ಆ ಬೆನ್ನಲ್ಲೇ ಕೊಡಗು ಪ್ರಾಕೃತಿಕ ವಿಕೋಪದ ಮತ್ತು ಸಂತ್ರಸ್ತರ ಸಮಿತಿ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗಮನ ಸೆಳೆಯುವz Àರೊಂದಿಗೆ ಪ್ರಾಮಾಣಿಕ ಹೋರಾಟ ನಡೆಸಿರುವದಾಗಿ ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಹಿತ ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ ಹಾಗೂ ತಾವು ಈ ಸಮಿತಿ ಪ್ರಮುಖರೊಂದಿಗೆ ಜಿಲ್ಲೆಯ ಸಂತ್ರಸ್ತರ ಸಹಿತ ಎಲ್ಲ ಜನತೆಯ ಹಿತಕ್ಕಾಗಿ ಏಕ ವೇದಿಕೆಯಡಿ ಸರಕಾರದ ಗಮನ ಸೆಳೆಯುವ ತೀರ್ಮಾನ ಕೈಗೊಂಡಿದ್ದು, ಆ ಬೆನ್ನಲ್ಲೇ ಈಗಷ್ಟೇ ಹುಟ್ಟಿಕೊಂಡಿರುವ ಸಮಿತಿ ಮುಖ್ಯಮಂತ್ರಿ ಭೇಟಿ ವೇಳೆ ಪ್ರತಿಭಟನೆಗೆ ಮುಂದಾಗಿರುವದು ಸರಿಯಲ್ಲವೆಂದು ಮಾರ್ನುಡಿದಿದ್ದಾರೆ.