ವೀರಾಜಪೇಟೆ, ಡಿ. 5: ಕಳೆದ 34ವರ್ಷಗಳ ಹಿಂದೆ ಕೊಡಗು ಕೇರಳ ಗಡಿ ಪ್ರದೇಶವಾದ ಸೊಳ್ಳೆಕೊಲ್ಲಿಯ ಮೀಸಲು ಅರಣ್ಯದಲ್ಲಿ ಬೆಲೆಬಾಳುವ ಮೂರು ಮರಗಳನ್ನು ಕಳವು ಮಾಡಿ ತಲೆಮರೆಸಿಕೊಂಡಿದ್ದ ನಿಡೂರು ಜೋಸ್ ಎಂಬಾತನನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಇಲ್ಲಿನ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಮೇರೆ ಆತನನ್ನು 15ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಕೇರಳದ ಕೂಟುಪೊಳೆ ಬಳಿಯ ಕಚೇರಿಕಡುವಿನ ನಿವಾಸಿ ನಿಡೂರು ಜೋಸ್ ಈತನಿಗೆ 30 ವರ್ಷ ವಯಸ್ಸಿದ್ದಾಗ ಈ ಕಳವು ನಡೆಸಿದ್ದು ಗ್ರಾಮಾಂತರ ಪೊಲೀಸರು ಈತನ ವಿರುದ್ಧ ಕಳವು ಪ್ರಕರಣ ದಾಖಲಿಸಿದ ನಂತರ ದೀರ್ಘಕಾಲ ತಲೆಮರೆಸಿಕೊಂಡಿದ. ನಿನ್ನೆ ದಿನ ರಾತ್ರಿ ಆತನ ಮನೆ ಮೇಲೆ ಧಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು ಈತನಿಗೆ ಈಗ 64ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಕಚೇರಿಕಡವು ಮನೆಯ ಮೇಲೆ ನಡೆದ ಧಾಳಿಯಲ್ಲಿ ಕುಟ್ಟ ವೃತ್ತ ನಿರೀಕ್ಷಕ ರಾಜು, ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯ ಬೋಪಣ್ಣ, ಸುಬ್ರಮಣಿ, ಪಿ.ಬೆಳ್ಳಿಯಪ್ಪ, ಕುಶಾಲಪ್ಪ ಭಾಗವಹಿಸಿದ್ದರು. ವೀರಾಜಪೇಟೆ ಡಿ.ವೈಎಸ್.ಪಿ ನಾಗಪ್ಪ ಮಾರ್ಗದರ್ಶನದಲ್ಲಿ ಈ ಧಾಳಿ ನಡೆಯಿತು.