ಗೋಣಿಕೊಪ್ಪಲು, ಡಿ. 5: ಬೆಂಗಳೂರು-ಕನಕಪುರ ಶ್ರೀ ಬಾಲಾಜಿ ಪಾದಯಾತ್ರೆ ಬಲಿಜ ಟ್ರಸ್ಟ್ ಮತ್ತು ಬೆಂಗಳೂರಿನ ಲಯನ್ ಡಾ. ಬಿ.ಎಂ. ರವಿನಾಯ್ಡು ಪ್ರಾಯೋಜಕತ್ವದಲ್ಲಿ ಜರುಗಿದ ರಾಜ್ಯಮಟ್ಟದ ಬಲಿಜ ಕ್ರೀಡೋತ್ಸವದಲ್ಲಿ ಕೊಡಗು ಬಲಿಜ ಸಮಾಜ ತಂಡ ಹಗ್ಗ-ಜಗ್ಗಾಟ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ.

ಕೊಡಗು ಬಲಿಜ ಸಮಾಜದ ನೇತೃತ್ವದಲ್ಲಿ ಮಹಿಳೆಯರ ಹಗ್ಗ-ಜಗ್ಗಾಟ, ರಂಗೋಲಿ ಹಾಗೂ ಕ್ರಿಕೆಟ್ ಪಂದ್ಯಾಟದಲ್ಲಿ ಕೊಡಗು ತಂಡ ಪ್ರತಿನಿಧಿಸಿದ್ದು ಉತ್ತಮ ಸಾಧನೆ ತೋರಿದೆ. ಕನಕಪುರದ ಮುನಿಸಿಪಲ್ ಕ್ರೀಡಾಂಗಣದಲ್ಲಿ ಜರುಗಿದ ಮಹಿಳೆಯರ ಹಗ್ಗ-ಜಗ್ಗಾಟ ಫೈನಲ್ಸ್‍ನಲ್ಲಿ ಮೂರ್ನಾಡು ಜ್ಯೋತಿ ಸುಬ್ರಮಣಿ ನಾಯಕತ್ವದ ತಂಡ ಅತಿಥೇಯ ಕನಕಪುರ ಕಾವ್ಯ ಹರೀಶ್ ತಂಡವನ್ನು 2-0 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಕೊಡಗು ಬಲಿಜ ಸಮಾಜ ತಂಡದ ವ್ಯವಸ್ಥಾಪಕರಾಗಿ ಸುಬ್ರಮಣಿ ಹಾಗೂ ಸ್ಪರ್ಧಾಳುಗಳಾಗಿ ಜ್ಯೋತಿ (ನಾಯಕಿ-ಮೂರ್ನಾಡು) ಗೀತಾನಾಯ್ಡು (ಪಾಲಿಬೆಟ್ಟ), ರಮ್ಯ (ಮೂರ್ನಾಡು), ರಶ್ಮಿ (ಬಲಮುರಿ), ಅನಿತಾ (ಕದನೂರು), ಸುನಿತಾ (ಕದನೂರು), ಗಾಯನ (ಕದನೂರು) ಮತ್ತು ಐಶ್ವರ್ಯ (ಮೂರ್ನಾಡು) ಭಾಗವಹಿಸಿದ್ದರು.

ರಂಗೋಲಿ ಸ್ಪರ್ಧೆಯಲ್ಲಿ ಕೊಡಗು ಬಲಮುರಿಯ ರಮ್ಯಾ ಸುಮಂತ್ ಪ್ರಥಮ ಬಹುಮಾನ ಗಳಿಸಿದರು.

ಕೊಡಗು ಜಿಲ್ಲಾ ಬಲಿಜ ಸಮಾಜದ ಸುಮಾರು 50 ಮಂದಿ ಪ್ರತಿನಿಧಿಗಳು ಬಲಿಜ ಉತ್ಸವದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮ ನಿರೂಪಣೆ, ಉಸ್ತುವಾರಿಯನ್ನು ಡಾ.ಬಿ.ಎಂ.ರವಿನಾಯ್ಡು, ಸಂಪಂಗಿ ರಾಮುಲು, ಟಿ.ಎಲ್.ಶ್ರೀನಿವಾಸ್, ಗೀತಾನಾಯ್ಡು ಇಂದುಮತಿ ನಿರ್ವಹಿಸಿದರು.

ಕೊಡಗು ಬಲಿಜ ಸಮಾಜದ ಸುಬ್ರಮಣಿ, ಉಪಾಧ್ಯಕ್ಷರಾದ ಟಿ.ವಿ.ಲೋಕೇಶ್, ಯತಿರಾಜು ನಾಯ್ಡು, ಟಿ.ಆರ್. ವಿಜಯ, ಕಾರ್ಯದರ್ಶಿ ಗೀತಾನಾಯ್ಡು ತಂಡದ ಉಸ್ತುವಾರಿ ವಹಿಸಿದ್ದರು. ಉತ್ಸವದಲ್ಲಿ ಸಮಾಜದ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಹಾಗೂ ಭರತನಾಟ್ಯ ಪ್ರತಿಭೆ ಮೂರ್ನಾಡು ಐಶ್ವರ್ಯ ಅವರನ್ನು ಕರ್ನಾಟಕ ರಾಜ್ಯ ಬಲಿಜ ಸಂಘಗಳ ಒಕ್ಕೂಟದ ಅಧ್ಯಕ್ಷ ವೀರೇಂದ್ರಕುಮಾರ್, ಸಂಘಟಕ ಸಂಪಂಗಿ ರಾಮುಲು, ಡಾ. ಬಿ.ಎಂ.ರವಿನಾಯ್ಡು ಮತ್ತು ರಾಜ್ಯ ಬಲಿಜ ಯುವ ಘರ್ಜನೆಯ ಅಧ್ಯಕ್ಷ ಅರ್ಜುನ್ ಸಾಗರ್ ನಾಯ್ಡು ಸನ್ಮಾನಿಸಿದರು.