ಗೋಣಿಕೊಪ್ಪ ವರದಿ, ಡಿ. 5: ಮಣ್ಣು ಪರೀಕ್ಷೆಯಿಂದಾಗಿ ಮಣ್ಣಿನಲ್ಲಿನ ಪೋಶಕಾಂಶಗಳ ಕೊರತೆ ಅರಿವಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಪಿ. ಆರ್. ಪಂಕಜ ಅಭಿಪ್ರಾಯಪಟ್ಟರು.

ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ತಾಲೂಕು ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪೊನ್ನಂಪೇಟೆ ಹೋಬಳಿ ಕೃಷಿ ಅಭಿಯಾನ ಮತ್ತು ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯಲ್ಲಿ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕೃಷಿಯಲ್ಲಿ ವೈಜ್ಞಾನಿಕ ಪದ್ದತಿ ಹೆಚ್ಚಾಗುತ್ತಿರುವದರಿಂದ ಕೃಷಿಕ ಹೆಚ್ಚು ಲಾಭಗಳಿಸಲು ಅವಕಾಶವಾಗುತ್ತಿದೆ. ಹಿಂದೆ ಮಣ್ಣಿನಲ್ಲಿನ ಪೋಶಕಾಂಶಗಳ ಕೊರತೆಯ ಅರಿವಿಲ್ಲದೆ ಹೆಚ್ಚು ನಷ್ಟ ಅನುಭವಿಸುತ್ತಿದ್ದರು. ಮಣ್ಣಿನ ರಕ್ಷಣೆ ಹೇಗೆ ಎಂಬುವದು ಅರಿವಿಗೆ ಬರುತ್ತಿರಲಿಲ್ಲ. ಆದರೆ, ನಷ್ಟದ ಪ್ರಮಾಣ ಇಂದು ಮಣ್ಣು ಪರೀಕ್ಷೆ ಮೂಲಕ ಕಡಿಮೆಯಾಗುತ್ತಿದೆ. ವೈಜ್ಞಾನಿಕ ಕೃಷಿ ಪದ್ದತಿಗೆ ಮುಂದಾಗಬೇಕು. ಮಣ್ಣಿನ ರಕ್ಷಣೆಗೆ ಕೃಷಿಕರು ಮುಂದಾಗಬೇಕಿದೆ ಎಂದರು.

ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಸಾಜು ಜಾರ್ಜ್ ಮಾತನಾಡಿ, ಮಣ್ಣಿನಲ್ಲಿ ಸಾವಯವ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆಗೆ ಪೂರಕವಾಗಿರುವ ಸೂಕ್ಷ್ಮ ಜೀವಾಣುಗಳನ್ನು ರಕ್ಷಿಸಬೇಕಿದೆ. ರಾಸಾಯನಿಕ ಗೊಬ್ಬರ ಬಳಕೆ ಹೆಚ್ಚಾಗುತ್ತಿದ್ದಂತೆ ಸೂಕ್ಷ್ಮ ಜೀವಾಣುಗಳ ನಾಶಕ್ಕೂ ಕಾರಣವಾಗುತ್ತಿದೆ. ಇದರಿಂದಾಗಿ ರಾಸಾಯನಿಕ ಗೊಬ್ಬರದ ಶೇ. 50 ರಷ್ಟನ್ನು ಕೂಡ ಮಣ್ಣು ತೆಗೆದುಕೊಳ್ಳುವದಿಲ. ಇದರಿಂದಾಗಿ ಆರ್ಥಿಕವಾಗಿಯೂ ನಷ್ಟ ಆಗುತ್ತಿದೆ. ಇದನ್ನು ಮನಗಂಡು ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರ ಬಳಕೆಯನ್ನು ಶೇಕಡವಾರು ಹೆಚ್ಚಿಸಬೇಕಿದೆ ಎಂದರು.

ಮಣ್ಣಿನಲ್ಲಿ ನೈಟ್ರೋಜನ್ ಸಮಾನತೆಯಲ್ಲಿದ್ದು, ಪಾಸ್ಪರಸ್ ಅಂಶ ಹೆಚ್ಚಿದ್ದಾಗ, ಪೊಟಾಶ್ ಅಂಶ ಕೂಡ ಕ್ಷೀಣಿಸಿರುತ್ತದೆ. ಇದರಿಂದ ಗಿಡಗಳ ಬೆಳವಣಿಗೆ ಉತ್ತಮವಾಗಿದ್ದರೂ ಫಸಲು ಕಡಿಮೆಯಾಗುತ್ತಿದೆ. ಇದನ್ನು ಮನಗಂಡು ಮಣ್ನಿನ ಫಲವತ್ತತೆಗೆ ಬೇಕಾದ ಸಾವಯವ ಬಳಕೆ ಮೂಲಕ ಸೂಕ್ಷ್ಮಜೀವಾಣುಗಳ ರಕ್ಷಣೆಗೆ ಮುಂದಾಗಬೇಕಿದೆ ಎಂದರು.

ಈ ಸಂದರ್ಭ ಗೋಣಿಕೊಪ್ಪ ಗ್ರಾ. ಪಂ. ಅಧ್ಯಕ್ಷೆ ಸೆಲ್ವಿ, ತಾ. ಪಂ. ಸದಸ್ಯರುಗಳಾದ ಪ್ರಕಾಶ್, ಆಶಾಜೇಮ್ಸ್, ಮಣ್ಣು ವಿಜ್ಞಾನಿ ಡಾ. ಶಿವಪ್ರಸಾದ್, ತಾಲೂಕು ಕೃಷಿ ಅಧಿಕಾರಿ ರೀನಾ, ವಿಜ್ಞಾನಿಗಳಾದ ಡಾ. ಪ್ರಭಾಕರ್, ವೀರೇಂದ್ರಕುಮಾರ್, ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಉಪಸ್ಥಿತರಿದ್ದರು.

ರೈತರುಗಳಾದ ಶಿವರಾಮ್ ಹಾಗೂ ರಾಧಾ ಅವರುಗಳಿಗೆ ಮಣ್ಣು ಪರೀಕ್ಷಾ ಕಾರ್ಡ್ ವಿತರಣೆ ಮಾಡಲಾಯಿತು. ಸುಸ್ಥಿರ ಕೃಷಿಗಾಗಿ ಮಣ್ಣಿನ ಆರೋಗ್ಯ ಮತ್ತು ಪರೀಕ್ಷೆಯ ಮಹತ್ವ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ವಸ್ತು ಪ್ರದರ್ಶನದಲ್ಲಿ ಕೃಷಿ ಪೂರಕ ಪರಿಕರಗಳು, ಸಲಹೆ, ಯಾಂತ್ರೀಕೃತ ಉಪಕರಣಗಳು ಪ್ರದರ್ಶನಗೊಂಡವು. ನಂದಿನಿ ಪ್ರಾರ್ಥಿಸಿದರು. ಡಾ. ಪ್ರಭಾಕರ್ ನಿರೂಪಿಸಿದರು. ಕೃಷಿ ತಾಲೂಕು ಅಧಿಕಾರಿ ರೀನಾ ಕಾರ್ಯಕ್ರಮಗಳಿಂದ ಕೃಷಿಕರಿಗೆ ಆಗುತ್ತಿರುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

-ಸುದ್ದಿಪುತ್ರ