ಮಡಿಕೇರಿ, ಡಿ.5 : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನಗರದ ಭಾರತೀಯ ವಿದ್ಯಾ ಭವನ ಕೊಡಗು ವಿದ್ಯಾಲಯ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕೊಡಗು ಜಿಲ್ಲಾ ಮಟ್ಟದ 26 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾರತೀಯ ವಿದ್ಯಾ ಭವನ ಕೊಡಗು ವಿದ್ಯಾಲಯದ ಮಾನ್ಯ ತಿಮ್ಮಯ್ಯ ಎಂಬ ವಿದ್ಯಾರ್ಥಿನಿಗೆ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.

ಸ್ವಚ್ಛ , ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳು ಎಂಬ ಕೇಂದ್ರ ವಿಷಯದಡಿ ಸಾಂಪ್ರಾದಾಯಿಕ ಜ್ಞಾನ ವ್ಯವಸ್ಥೆಗಳು ಎಂಬ ಉಪ ವಿಷಯದಡಿ ದೊಡ್ಡಪತ್ರೆ ಮತ್ತು ಲೋಳೆಸರದ ಔಷಧಿ ಗುಣಗಳು ಕುರಿತು ತನ್ನ ಸಹಪಾಠಿ ಲಿಯಾ ಮರಿಯಾಳೊಂದಿಗೆ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದ ಮಾನ್ಯ ತಿಮ್ಮಯ್ಯ ಉತ್ತಮವಾಗಿ ಪ್ರಬಂಧ ಮಂಡಿಸಿ ಗಮನ ಸೆಳೆದರು. ವಿದ್ಯಾರ್ಥಿಗಳು ಮಾರ್ಗದರ್ಶಿ ಶಿಕ್ಷಕಿ ಎಂ.ಎಸ್.ಶೃತಿ ಅವರ ಮಾರ್ಗದರ್ಶನ ದಲ್ಲಿ ಯೋಜನೆ ತಯಾರಿಸಿ ಪ್ರಬಂಧ ಮಂಡಿಸಿದ್ದಾರೆ.

ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಗಳಿಸಿದ ಮಾನ್ಯ ತಿಮ್ಮಯ್ಯ ಮತ್ತು ತಂಡಕ್ಕೆ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಲಕ್ಷ್ಮೀ ಪ್ರಿಯ ಯುವ ವಿಜ್ಞಾನಿ ಪ್ರಶಸ್ತಿ ವಿತರಿಸಿದರು.

ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್, ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್.ಸುರೇಶ್, ಶೈಕ್ಷಣಿಕ ಸಂಯೋಜಕ ಜಿ.ಶ್ರೀಹರ್ಷ, ಕೊಡಗು ವಿದ್ಯಾಲಯದ ಮಕ್ಕಳ ಸಮಾವೇಶದ ಸಂಯೋಜಕಿ ಪೊನ್ನಮ್ಮ, ಶಿಕ್ಷಣ ಸಂಯೋಜಕ ಬಿ.ಕೆ.ರಾಧಾಕೃಷ್ಣ, ಉಪನ್ಯಾಸಕ ಜಿ.ಶ್ರೀನಾಥ್, ಮುಖ್ಯ ಶಿಕ್ಷಕ ಎಂ.ಕೆ.ನಾಗರಾಜ್ ಮತ್ತಿತರರು ಇದ್ದರು.