ವೀರಾಜಪೇಟೆ, ಡಿ. 5: ಶಿಕ್ಷಣ ಇದ್ದರೆ ಸಾಲದು. ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಅಭಿವೃದ್ದಿ ಪಡಿಸಿಕೊಂಡರೆ ಒಳ್ಳೆಯ ಉದ್ಯೋಗವನ್ನು ಪಡೆದುಕೊಂಡು ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಬಹುದು ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನಾ ಸ್ವಾಮೀಜಿ ಹೇಳಿದರು.

ವೀರಾಜಪೇಟೆಯ ಜೀವನಜ್ಯೋತಿ ಟ್ರಸ್ಟ್ ಹಾಗೂ ಬೆಂಗಳೂರಿನ ದಿ ನಡ್ಜ್ ಫೌಂಡೇಶನ್ ವತಿಯಿಂದ ಇಲ್ಲಿನ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಕೌಶಲ್ಯ ತರಬೇತಿ ಹಾಗೂ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಿಕ್ಷಣ ನಮಗೆ ಎಲ್ಲವನ್ನು ಕೊಡುವದಿಲ್ಲ. ನಮ್ಮಲ್ಲಿ ಬಹುತೇಕ ಜನರು ಗ್ರಾಮೀಣ ಪ್ರದೇಶದಲ್ಲಿ ಇರುವವರು. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಕೌಶಲ್ಯ ಹಾಗೂ ಉತ್ತಮ ಪ್ರತಿಭೆಯನ್ನು ಹೊಂದಿರುವ ಅಭ್ಯರ್ಥೀಗಳಿಗೆ ನಗರ ಪ್ರದೇಶಗಳಿಗೆ ತೆರಳಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಇಂತಹ ಉದ್ಯೋಗ ಮೇಳಗಳು ಸೂಕ್ತ ಪ್ರತಿಭೆಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ ದೇಶದ ಜನಸಂಖ್ಯೆಯಲ್ಲಿ ಶೇ. 65ಕ್ಕಿಂತ ಹೆಚ್ಚು 35 ವರ್ಷದ ಕೆಳಗಿರುವವರೇ ಹೆಚ್ಚಾಗಿದ್ದಾರೆ. ಕೇವಲ ಪದವಿ ಪಡೆದುಕೊಂಡ ಮಾತ್ರಕ್ಕೆ ಸಾಧನೆ ಮಾಡಲು ಸಾಧ್ಯವಿಲ್ಲ. ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಕೇಂದ್ರಗಳು ನಮಗೆ ಯಾವ ಕ್ಷೇತ್ರದಲ್ಲಿ ಆಸ್ತಿ ಇದೆ ಆ ಕ್ಷೇತ್ರಗಳನ್ನು ಆಯ್ಕೆಮಾಡಿಕೊಳ್ಳಲು ಸಹಕಾರಿಯಾಗಲಿದೆ. ಇಂದು ಭಾರತ ದೇಶ ಅಭಿವೃದ್ದಿಯತ್ತ ಸಾಗುತ್ತಿದ್ದು ಎಲ್ಲವನ್ನೂ ಮೇಕ್ ಇನ್ ಇಂಡಿಯಾ ಎಂಬ ನಾಮಫಲಕದೊಂದಿಗೆ ಚೀನಾ ದೇಶವನ್ನು ಹಿಂದಿಕ್ಕಿದೆ. 2022ಕ್ಕೆ ಭಾರತ ಅಭಿವೃದ್ಧಿ ಹೊಂದಿದ ಉನ್ನತ ಮಟ್ಟದ ರಾಷ್ಟ್ರವಾಗಲಿದೆ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ನಗರ ಪ್ರದೇಶಗಳಿಗೆ ತೆರಳಿ ಉದ್ಯೋಗ ಪಡೆದುಕೊಳ್ಳುವದು ಕಷ್ಟದ ಕೆಲಸವಾಗಿದೆ. ನಾವು ಯಾವದೇ ಕೆಲಸ ನಿರ್ವಹಿಸಿದರೂ ಆ ಕೆಲಸವನ್ನು ಪ್ರೀತಿಯಿಂದ ಮಾಡಬೇಕು ಎಂದರು.

ವೇದಿಕೆಯಲ್ಲಿ ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ ಉಪಸ್ಥಿತರಿದ್ದರು. ಜೀವನ್ ಜ್ಯೋತಿ ಟ್ರಸ್ಟ್‍ನ ಅಧ್ಯಕ್ಷ ಅಜಯ್ ರಾವ್ ಅಧ್ಯಕ್ಷತೆ ವಹಿಸಿದ್ದರು. ದಿನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.