ಮಡಿಕೇರಿ, ಡಿ. 5: ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭ; ಸಂಕಷ್ಟದಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಬೇರೆ ಬೇರೆ ಕಡೆಗಳಿಂದ ದಾನಿಗಳು ನೆರವಿನ ರೂಪದಲ್ಲಿ ನೀಡಿರುವ ಅಕ್ಕಿ, ಮಡಿಕೇರಿಯ ಗೋದಾ ಮೊಂದರಲ್ಲೇ 43 ಟನ್‍ಗಳಷ್ಟು ದಾಸ್ತಾನು ಇರುವದು ಬೆಳಕಿಗೆ ಬಂದಿದೆ. ನ. 30 ರಂದು ಇಲ್ಲಿನ ಸರಕಾರಿ ಪ.ಪೂ. ಕಾಲೇಜು ಆವರಣದ ಪ್ರಾಥಮಿಕ ಶಾಲೆಯ ಮಕ್ಕಳ ಪೋಷಕರು ಈ ಅಂಶವನ್ನು ಬಹಿರಂಗಗೊಳಿಸಿದ್ದಾರೆ.ಜಿಲ್ಲಾಡಳಿತದ ಕೋರಿಕೆ ಮೇರೆಗೆ ಇನ್ನು ಪೂರ್ಣಗೊಳ್ಳದಿರುವ ಸರಕಾರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಮಳೆಗಾಲದಲ್ಲಿ ಸಂತ್ರಸ್ತರಿಗಾಗಿ ಹರಿದು ಬಂದಿರುವ ವಸ್ತುಗಳನ್ನು ಇರಿಸಲು ಗೋದಾಮಾಗಿ ಬಳಸಿಕೊಳ್ಳಲಾಗಿದೆ. ಈ ಗೋದಾಮಿಗೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ನೆರವಿನ ರೂಪದಲ್ಲಿ ಬಂದಿರುವ ವಸ್ತುಗಳನ್ನು ತಂದು ಇರಿಸಲಾಗಿದೆ.

ಆ ಬೆನ್ನಲ್ಲೇ ಜಿಲ್ಲೆಯ ವಿವಿಧೆಡೆಗಳಲ್ಲಿ ಸ್ಥಾಪಿಸಲಾಗಿದ್ದ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೂ ಸರಬರಾಜು ಮಾಡಲಾಗಿದೆ. ಸಂತ್ರಸ್ತರಿಗಾಗಿ ಇದುವರೆಗೆ ಸಾಕಷ್ಟು ಪರಿಹಾರ ಕಲ್ಪಿಸಿದ್ದರೂ ಕೂಡ, ದಾಸ್ತಾನು ಪ್ರಮಾಣ ಇನ್ನು ಕೂಡ ಖಾಲಿಯಾಗದೆ ಉಳಿದುಕೊಂಡಿದೆ. ಹೀಗೆ ಒಂದು ಗೋದಾಮಿನಲ್ಲೇ ಇಂದಿಗೂ 43 ಟನ್‍ಗಳಷ್ಟು ಅಕ್ಕಿ ಉಳಿದುಕೊಂಡಿರುವದು ಅಚ್ಚರಿ ಮೂಡುವಂತಾಗಿದೆ.

ಮಾತ್ರವಲ್ಲದೆ ರಾಶಿ ರಾಶಿ ವಸ್ತುಗಳನ್ನು ಈ ಶಾಲಾ ಕಟ್ಟಡದ ಒಂದೊಂದು ಕೊಠಡಿಯಲ್ಲಿ ಕಾಣಬಹುದಾಗಿದೆ. ಮಕ್ಕಳ ದೈನಂದಿನ ಚಟುವಟಿಕೆಗೆ ಮುರುಕು ಕೊಠಡಿಗಳೊಂದಿಗೆ, ಶಿಥಿಲಗೊಂಡಿರುವ

ತೀರಾ ಅಪಾಯಕಾರಿ ಕಟ್ಟಡದಲ್ಲಿ ಪಾಠ ಪ್ರವಚನ ಬದಲು; ಬೆಂಗಳೂರಿನ ಸರಕಾರಿ ಸಾಮ್ಯದ ಸಂಸ್ಥೆ ನಿರ್ಮಿಸಿ ಕೊಟ್ಟಿರುವ ನೂತನ ಸುಸಜ್ಜಿತ ಕೊಠಡಿಗಳನ್ನು ಶಾಲೆಗೆ ಬಿಟ್ಟುಕೊಡುವಂತೆ ಶಾಲಾಭಿವೃದ್ಧಿ ಸಮಿತಿ ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ.

(ಮೊದಲ ಪುಟದಿಂದ) ಆ ಮೇರೆಗೆ ಜಿಲ್ಲಾಧಿಕಾರಿ ಕೂಡ ಆದಷ್ಟು ಬೇಗನೆ ಈ ಕಟ್ಟಡವನ್ನು ಶೈಕ್ಷಣಿಕ ಚಟುವಟಿಕೆಗೆ ಬಿಟ್ಟುಕೊಡಲು, ಅಲ್ಲಿರುವ ದಾಸ್ತಾನುಗಳನ್ನು ಬೇರೆಡೆಗೆ ತೆರವು ಮಾಡಿಕೊಡಲಾಗುವದು ಎಂದು ಶಾಲಾ ಅಭಿವೃದ್ಧಿ ಸಮಿತಿ ಪ್ರಮುಖರಿಗೆ ಭರವಸೆ ನೀಡಿದ್ದಾರೆ.

ರಾಶಿ ರಾಶಿ ವಸ್ತುಗಳು: ಈ ನಡುವೆ ಸಂಬಂಧಿಸಿದ ಶಾಲಾ ಕಟ್ಟಡದ ಒಂದೊಂದು ಕೊಠಡಿಯಲ್ಲೂ ರಾಶಿ ರಾಶಿ ವಸ್ತುಗಳು ತುಂಬಿಕೊಂಡಿವೆ. ಈಗಾಗಲೇ ಜಿಲ್ಲೆಯ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ತಂಗಿದ್ದ ಮಂದಿಗೆ ಬೇಕಾಗುವಷ್ಟು ಆಹಾರ ವಸ್ತುಗಳ ಸಹಿತ ನಿತ್ಯೋಪಯೋಗಿ ಸಾಮಗ್ರಿಯೊಂದಿಗೆ ಎಲ್ಲ ವಸ್ತುಗಳು ಪೂರೈಕೆಗೊಂಡಿವೆ. ಹೀಗಿದ್ದೂ ದಾಸ್ತಾನು ಉಳಿದುಕೊಂಡಿದೆ.

60 ಸಾವಿರ ಸೋಪು: ಮೂಲಗಳ ಪ್ರಕಾರ ಮೈಸೂರು ಸ್ಯಾಂಡಲ್ ಸಂಸ್ಥೆ ಪೂರೈಸಿರುವ 13 ಸಾವಿರ ಸ್ನಾನದ ಸಾಬೂನುಗಳೊಂದಿಗೆ ಇತರ 60 ಸಾವಿರ ಇತರ ಸೋಪುಗಳ ಸಹಿತ 73 ಸಾವಿರದಷ್ಟು ದಾಸ್ತಾನು ಇದೆಯಂತೆ. ಅಂತೆಯೇ ಸಾಕಷ್ಟು ಸ್ಟೀಲ್ ಪಾತ್ರೆಗಳ ಸಹಿತ ಪ್ಲಾಸ್ಟಿಕ್ ಬಕೆಟ್, ಮಗ್ ಇತ್ಯಾದಿ ಸಾವಿರಾರು ಸಂಖ್ಯೆಯಲ್ಲಿ ದಾಸ್ತಾನಿವೆ.

ಲೇಖನ ಸಾಮಗ್ರಿ: ಅಂತೆಯೇ ಪ್ರತಿಷ್ಠಿತ ಉದ್ದಿಮೆಗಳು ಶಾಲಾ ಮಕ್ಕಳಿಗೆ ರವಾನಿಸಿರುವ ನೋಟ್ ಬುಕ್‍ಗಳು, ಲೇಖನ ಸಾಮಗ್ರಿ ಸಹಿತ ನಿತ್ಯೋಪಯೋಗಿ ವಸ್ತುಗಳು ಸಂತ್ರಸ್ತರಿಗಾಗಿ ಹರಿದು ಬಂದಿರುವದು ಉಪಯೋಗವಾಗದೆ ಉಳಿದಿವೆ.

ರಾಶಿ ರಾಶಿ ವಸ್ತ್ರ: ಈ ಶಾಲಾ ಕಟ್ಟಡ ಸಂದರ್ಶಿಸುತ್ತಾ ಸಾಗಿದರೆ ಮೂರುವರೆ ಸಾವಿರಕ್ಕೂ ಅಧಿಕ ಬೆಡ್‍ಶೀಟ್‍ಗಳು, ಸಾವಿರಾರು ಕಂಬಳಿಗಳು, ಜಮಖಾನೆಗಳು, ಚಾಪೆಗಳು, ಮಹಿಳೆಯರು, ಹೆಣ್ಣು ಮಕ್ಕಳಿಗಾಗಿ ಒಳ ಉಡುಪು ಇತ್ಯಾದಿ ಭಾರೀ ದಾಸ್ತಾನು ಗೋಚರಿಸಿವೆ.

ಮೂರು ಸಾವಿರದಷ್ಟು ಅಂದಾಜು ಸೀರೆಗಳು, ಸುಮಾರು 4 ಸಾವಿರ ಜತೆ ಚಪ್ಪಲಿಗಳು, ಹೆಣ್ಣು ಮತ್ತು ಗಂಡು ಮಕ್ಕಳ 8 ಸಾವಿರಕ್ಕೂ ಅಧಿಕ ಉಡುಪುಗಳು, ಸುಮಾರು 3 ಸಾವಿರ ಪುರುಷರ ಉಡುಪು ಸೇರಿದಂತೆ 13,900 ರಷ್ಟು ಟೂತ್‍ಪೇಸ್ಟ್ ಇತ್ಯಾದಿ ದಾಸ್ತಾನಿವೆ. ಈ ಎಲ್ಲವನ್ನು ಯಾರಿಗೆ ನೀಡುವದು ಎಂಬ ಚಿಂತೆ ಹುಟ್ಟಿಕೊಂಡಿದ್ದು, ಬೇರೆಡೆ ದಾಸ್ತಾನು ಇರಿಸಲು ಜಾಗಕ್ಕಾಗಿಯೂ ಜಿಲ್ಲಾಡಳಿತ ಚಿಂತೆಯಲ್ಲಿರುವ ಸುಳಿವು ಲಭಿಸಿದೆ.

ಒಟ್ಟಿನಲ್ಲಿ ಈಗಾಗಲೇ ಸಂತ್ರಸ್ತರಿಗೆ ಉಪಯೋಗಕ್ಕಿಂತ ಅಧಿಕ ವಸ್ತುಗಳು ಒಂದೆಡೆ ಕೈ ಸೇರಿರುವ ಮಾತಿದ್ದರೆ, ಜಿಲ್ಲಾಡಳಿತದ ಸುಪರ್ದಿಯಲ್ಲಿರುವ ದಾಸ್ತಾನು ಗಳನ್ನು ನೈಜ ಫಲಾನುಭವಿ ಗಳಿಗೆ ಸೀಮಿತವಾಗಿ ವಿತರಿಸುವದು ಹೇಗೆಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸರಕಾರದ ನಿಯಮಗಳು, ಸಾರ್ವಜನಿಕ ಟೀಕೆಗಳು, ಅರ್ಹತೆಯ ಮಾನದಂಡ ಇತ್ಯಾದಿ ನಡುವೆ ದಾನಿಗಳ ನೆರವು ಗೋದಾಮಿನಲ್ಲಿ ಉಳಿಯುವಂತಾಗಿದೆ.