ಮಡಿಕೇರಿ, ಡಿ. 5: ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಗ್ರೀನ್ ಸಿಟಿ ಫೋರಂ ಸಂಚಾಲಕ ಕುಕ್ಕೇರ ಜಯ ಚಿಣ್ಣಪ್ಪ ಕರೆ ನೀಡಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಿಂದ ಬುಧವಾರ ಮಡಿಕೇರಿಯಲ್ಲಿ ಸ್ವಚ್ಛತೆ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು. ಗಾಂಧಿ ಮೈದಾನ ದಲ್ಲಿರುವ ಗಾಂಧಿ ಪ್ರತಿಮೆ ಎದುರು ಜಾಥಾ ಚಾಲನಾ ಕಾರ್ಯಕ್ರಮ ನಡೆಯಿತು.

ಕೇಂದ್ರ ಸರ್ಕಾರ ಸ್ವಚ್ಛತೆ ಬಗ್ಗೆ ಹೆಚ್ಚಿನ ಮುತುವರ್ಜಿ ತೋರಿದೆ. ದೇಶಾದ್ಯಂತ ಪ್ರತಿಯೊಂದು ಮನೆಯಲ್ಲಿಯೂ ಶೌಚಾಲಯ ಇರುವಂತೆ ಗಮನ ಹರಿಸಲಾಗಿದೆ. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ನಮ್ಮಿಂದ ಪರಿಸರ ಅಶುಚಿತ್ವವಾಗದಂತೆ ಗಮನ ಹರಿಸಬೇಕು. ಪ್ರತಿಯೊಬ್ಬರು ಜಾಗೃತರಾದಲ್ಲಿ ನಮ್ಮ ಹಳ್ಳಿ, ಜಿಲ್ಲೆ, ರಾಜ್ಯ, ದೇಶ ಸ್ವಚ್ಛವಾಗಿರುತ್ತದೆ ಎಂದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ 5ನೇ ತರಗತಿಯಿಂದ 9ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಜನರಲ್ ಕೆ.ಎಸ್. ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನ ಕೆಲವು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿದ್ದರು. ಗಾಂಧಿ ಮೈದಾನದಿಂದ ರಾಜಾಸೀಟ್ ರಸ್ತೆ ಮೂಲಕ ವೆಬ್ಸ್ ರಸ್ತೆ ಹಾದು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದವರೆಗೆ ಜಾಥಾ ನಡೆಸಿದರು. ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ ಎಂಬ ಘೋಷಣೆ ಕೂಗಿದರು. ಜಾಗೃತಿ ಕರಪತ್ರಗಳನ್ನು ಹಿಡಿದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಶಿಸ್ತುಬದ್ಧವಾಗಿ ಸಾಗಿದರು. ವಿದ್ಯಾರ್ಥಿಗಳ ಬ್ಯಾಂಡ್ ಸಾರ್ವಜನಿಕರ ಗಮನ ಸೆಳೆಯಿತು.

ಜಾಥಾದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಹರೀಶ್, ಉಪಪ್ರಾಂಶುಪಾಲರಾದ ವನಿತಾ, ಕಾರ್ಯಕ್ರಮ ಸಂಯೋಜಕಿ ಶಿಲ್ಪಾ ಪೊನ್ನಮ್ಮ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್, ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ನಿರ್ದೇಶಕರಾದ ಮೋಂತಿ ಗಣೇಶ್, ಅಜ್ಜಮಾಡ ರಮೇಶ್ ಕುಟ್ಟಪ್ಪ ಇದ್ದರು.