ಶ್ರೀಮಂಗಲ, ಡಿ. 5: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದ ಹಿತದೃಷ್ಟಿಯಿಂದ ಯಾವದೇ ಹೋಂಸ್ಟೇ ಮತ್ತು ರೆಸಾರ್ಟ್‍ಗಳಿಗೆ ಅನುಮತಿ ನೀಡದಂತೆ ಗ್ರಾಮದಲ್ಲಿ ನಡೆದ 62ನೇ ಊರೋರ್ಮೆ ಸಭೆಯಲ್ಲಿ ನಿರ್ಣಯ ಕೈಗೊಳ್ಳ ಲಾಯಿತು.

ಪೊರಾಡು ಊರು ಪಂಚಾಯಿತಿ ಅಧ್ಯಕ್ಷ ಮೀದೇರಿರ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಊರೋರ್ಮೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಗ್ರಾಮದಲ್ಲಿ ಇಲ್ಲಿನ ಮೂಲನಿವಾಸಿ ಗಳು ಇದುವರೆಗೆÀ ಯಾವದೆ ಹೋಂಸ್ಟೇ ಅಥವಾ ರೆಸಾರ್ಟ್ ನಡೆಸುತ್ತಿಲ್ಲ. ಆದರೆ ಹೊರಗಿನ ವ್ಯಕ್ತಿಗಳು ಗ್ರಾಮದಲ್ಲಿ ಜಾಗ ಖರೀದಿಸಿ, ಇದೀಗ ಹಲವು ಕಟ್ಟಡಗಳನ್ನು ನಿರ್ಮಿಸಿ ಬಿರುನಾಣಿ ಗ್ರಾ.ಪಂ ಯಲ್ಲಿ ಅನುಮತಿಗಾಗಿ ಅರ್ಜಿ ಸಲ್ಲಿಸಿರುವದು ಗಮನಕ್ಕೆ ಬಂದ ತಕ್ಷಣ ಅದಕ್ಕೆ ಅನುಮತಿ ನೀಡಬಾರದೆಂದು ಊರು ಪಂಚಾಯಿತಿಯಿಂದ ಆಕ್ಷೇಪಣೆ ಪತ್ರ ಸಲ್ಲಿಸಲಾಗಿದೆ ಎಂದು ಅಧ್ಯಕ್ಷ ತಿಳಿಸಿದರು.

ಗ್ರಾಮದಲ್ಲಿ ಎಲ್ಲರೂ ಕೃಷಿಯನ್ನು ಅವಲಂಭಿಸಿ ಬದುಕುತ್ತಿದ್ದು ಹೋಂಸ್ಟೇ ಅಥವಾ ರೆಸಾರ್ಟ್ ಇಲ್ಲಿನ ಸ್ಥಳಿಯರಿಗೆ ಬದಕಲೂ ಅನಿವಾರ್ಯ ಅಲ್ಲ. ಆದ್ದರಿಂದ ಬಿರುನಾಣಿ ಗ್ರಾ.ಪಂ. ಯಾವದೇ ಕಾರಣಕ್ಕೆ ಸ್ಥಳೀಯರಿಗಾಗಲೀ ಹೊರಗಿನವರಿ ಗಾಗಲಿ ಹೋಂಸ್ಟೇ ಗಳಿಗೆ ಅನುಮತಿ ನೀಡ ಬಾರದು. ಗ್ರಾಮಸ್ಥರ ಅಭಿಪ್ರಾಯ ಮೀರಿ ಹೋಂ ಸ್ಟೇಗೆ ಅನುಮತಿ ನೀಡಿದರೆ ಗ್ರಾ.ಪಂ ಸದಸ್ಯರು ಹೊಣೆಯಾಗ ಬೇಕಾಗುತ್ತದೆ. ಅನಧಿಕೃತವಾಗಿ ಹೋಂಸ್ಟೇ ರೆಸಾರ್ಟ್ ನಡೆಸುವದು ಕಂಡು ಬಂದರೆ ಅದರ ವಿರೋಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರ ಪರವಾಗಿ ಬಲ್ಯಮೀದೇರಿರ ವಿಜಯ ಪ್ರಸಾದ್ ಹೇಳಿದರು.

ಗ್ರಾಮದಲ್ಲಿ ಖಾಲಿ ಜಾಗ ಖರೀದಿಸಿರುವ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತಮ್ಮ ಜಾಗದಲ್ಲಿ ಒಂದೂ ಗಿಡ ಕಾಫಿ, ಒಂದೂ ಬಳ್ಳಿ ಕರಿಮೆಣಸು ಇಲ್ಲದಿದ್ದರೂ ಆರ್.ಟಿ.ಸಿ. ಬೆಳೆ ಕಲಂನಲ್ಲಿ ಕಾಫಿ-ಕರಿಮೆಣಸು ಎಂದು ನಮೂದಿಸಲಾಗಿದೆ. ಆದರೆ ಆ ಜಾಗದಲ್ಲಿ ಸಂಪೂರ್ಣವಾಗಿ 6 ರಿಂದ 10ಕ್ಕೂ ಅಧಿಕ ವಿವಿಧ ಹೋಂಸ್ಟೇಯ ಐಶಾರಾಮಿ ಕಟ್ಟಡ, ರಸ್ತೆ ನಿರ್ಮಿಸಲಾಗಿದೆ. ಖಾಲಿ ಜಾಗ ಹಾಗೂ ಕಟ್ಟಡಗಳೇ ತುಂಬಿರುವ ಜಾಗದ ಆರ್.ಟಿ.ಸಿ.ಯಲ್ಲಿ ಬೆಳೆ ನಮೂನೆ ಮಾಡಿರುವದು ಕಂದಾಯ ಇಲಾಖೆಯ ಲೋಪವಾಗಿದೆ ಎಂದು ಸಭೆಯಲ್ಲಿ ಗ್ರಾಮಸ್ಥರು ಆಕ್ಷೇಪಿಸಿದರು.

ಗ್ರಾಮದಲ್ಲಿರುವ ಮೂರು ದೇವಕಾಡುಗಳನ್ನು ರಕ್ಷಿಸಲು ಅರಣ್ಯ ಇಲಾಖೆ ವತಿಯಿಂದ ಸುತ್ತಲೂ ಯಂತ್ರದ ಮೂಲಕ ಕಂದಕ ತೋಡಲು ಮುಂದಾಗಿರುವದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಯಂತ್ರದ ಮೂಲಕ ಸುಮಾರು 20 ಅಡಿ ಕಂದಕ ತೋಡುವದರಿಂದ ಹೆಚ್ಚಿನ ಪ್ರಮಾಣದಲ್ಲಿ ಮರಗಳು ನಾಶವಾಗಲಿದೆ. ಆದ್ದರಿಂದ ದೇವರಕಾಡಿನ ಹದ್ದುಬಸ್ತು ಗುರುತಿಸಿ ಸಿಮೆಂಟ್ ಕಂಬಗಳನ್ನು ಹಾಕಿ ತಂತಿ ಬೇಲಿ ನಿರ್ಮಿಸಿಕೊಡುವಂತೆ ಅರಣ್ಯ ಇಲಾಖೆಯಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಊರು ಪಂಚಾಯಿತಿ ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್ ತಿಳಿಸಿದರು.

ಗ್ರಾಮದಲ್ಲಿ ತಮ್ಮ ಜಾಗಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಎದುರಾದರೆ ಸ್ಥಳೀಯ ಮೂಲ ನಿವಾಸಿಗಳಿಗೆ ನೀಡುವಂತೆ ಆಗ್ರಹಿಸಲಾಯಿತು.

ಈ ಸಂದರ್ಭ ಆಡಳಿತ ಮಂಡಳಿ ವರದಿ, ಲೆಕ್ಕಪತ್ರವನ್ನು ಕಾರ್ಯದರ್ಶಿ ಸಂಪತ್ ಮಂಡಿಸಿದರು. ಊರು ಪಂಚಾಯಿತಿ ಯ ಸದಸ್ಯರು, ಊರಿನ ದೇವಸ್ಥಾನದ ಪಾರಂಪರಿಕ ಕಳಪರೆಗಳಾದ ಮೀದೇರಿರ ವಿಜಯ್, ಬಲ್ಯಮೀದೇರಿರ ಗಣಪತಿ, ಅಣ್ಣೀರ ನಿರಂಜನ್ ಹಾಜರಿದ್ದರು.