ಮಡಿಕೇರಿ, ಡಿ. 5: ಕೊಡಗು ಜಿಲ್ಲೆ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವದರಿಂದ ಯಾವದೇ ನಿರ್ಬಂಧಗಳನ್ನು ಹೇರದೆ ರಾಜ್ಯ ಸರ್ಕಾರ ಕೃಷಿಕರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕೆಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ಇಪ್ಪತ್ತಕ್ಕೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿ ಘೋಷಿಸಿರುವ ಸಾಲಮನ್ನಾ ಯೋಜನೆಯಿಂದ ಜಿಲ್ಲೆಯ ಕೃಷಿಕ ಸಮುದಾಯಕ್ಕೆ ಯಾವದೇ ಲಾಭ ದೊರೆಯಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜುಲೈ 10ಕ್ಕೆ ಅನುಗುಣವಾಗಿ 33 ಸಾವಿರ ಬೆಳೆಗಾರರು 486 ಕೋಟಿ ಬೆಳೆÉ ಸಾಲವನ್ನು ಹೊಂದಿಕೊಂಡಿದ್ದು, ಪ್ರಾಕೃತಿಕ ವಿಕೋಪದಿಂದ ಜಿಲ್ಲೆ ತತ್ತರಿಸಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಕೊಡಗಿನ 6 ಗ್ರಾಮ ಪಂಚಾಯಿತಿಗಳ 30ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಅತಿವೃಷ್ಟಿಯಿಂದ ಅತಿ ಹೆಚ್ಚಿನ ಹಾನಿಯಾಗಿದ್ದು, ಈ ಗ್ರಾಮಗಳ ಎಲ್ಲಾ ಕೃಷಿಕರ ಬೆಳೆÉ ಸಾಲ ಸೇರಿದಂತೆ ಎಲ್ಲಾ ವಿಧದ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕೆಂದು ಆಗ್ರಹಿಸಿ ದರು.

ಪ್ರಾಕೃತಿಕ ವಿಕೋಪದ ಬೆನ್ನಲ್ಲೆ ಕಾಫಿ ಫಸಲಿನ ಧಾರಣೆ ನೆಲಕಚ್ಚಿರುವ ಬೆಳವಣಿಗೆಗಳಿಂದ ಜಿಲ್ಲೆಯ ಕೃಷಿಕನ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರದ ಪರಿಹಾರ ಕಾರ್ಯಗಳು ವಿಳಂಬವಾಗುತ್ತಿರುವದರಿಂದ ಜಿಲ್ಲೆಯ ಬೆಳೆಗಾರರ ಬದುಕು ಆತಂಕಕ್ಕೆ ಸಿಲುಕಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಸಹಕಾರ ಯೂನಿಯನ್ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರು, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರೊಂದಿಗೆ ಚರ್ಚಿಸಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಗ್ರಾಮಗಳ ಕೃಷಿಕರು, ಬೆಳೆÉಗಾರರ ಎಲ್ಲಾ ಸಾಲ ಮನ್ನಾ ಮಾಡುವಂತೆ ಹಾಗೂ ಜಿಲ್ಲೆಯ ಎಲ್ಲಾ ಬೆಳೆಗಾರರ ಬೆಳೆ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಇಲ್ಲಿಯವರೆಗೆ ಸೂಕ್ತ ಸ್ಪಂದನ ದೊರಕಿಲ್ಲವೆಂದು ಮನು ಮುತ್ತಪ್ಪ ಬೇಸರ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ನಾಡಿನ ವಿವಿಧೆಡೆಗಳಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋಟ್ಯಂತರ ನೆರವು ಹರಿದು ಬಂದಿದ್ದು, ರಾಜ್ಯ ಸರ್ಕಾರ ನೆರವಿನ ಮೊತ್ತದ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿ ದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ 548 ಕೊಟಿ ಪರಿಹಾರ ಹಣವನ್ನು ಸಂಪೂರ್ಣವಾಗಿ ಕೊಡಗಿಗೆ ವಿನಿಯೋಗಿಸಬೇಕೆಂದು ಅವರು ಆಗ್ರಹಿಸಿದರು. ಸಹಕಾರ ಯೂನಿಯನ್ ನಿರ್ದೇಶಕ ಹಾಗೂ ಕರಡ ವಿಎಸ್‍ಎಸ್‍ಎನ್ ಅಧ್ಯಕ್ಷ ಕೋಡಿರ ಪ್ರಸನ್ನ ಮಾತನಾಡಿ, ಸಾಲಮನ್ನಾ ಸೌಲಭ್ಯಕ್ಕೆ ಸರ್ಕಾರ ಹಲವಾರು ನಿರ್ಬಂಧಗಳನ್ನು ವಿಧಿಸಿದ್ದು, ಸೌಲಭ್ಯ ಪಡೆಯುವ ಸದಸ್ಯರಿಂದ ಮಾಹಿತಿಗಳನ್ನು ಪಡೆದು ಆನ್‍ಲೈನ್ ಮೂಲಕ ಪ್ರತಿ ಸಹಕಾರ ಸಂಘಗಳಿಂದ ಕಳುಹಿಸಬೇಕು. ಆದರೆ, 70 ಕ್ಕೂ ಹೆಚ್ಚಿನ ಮಾಹಿತಿಗಳನ್ನು ಒದಗಿಸಬೇಕಿರುವದರಿಂದ ದಿನಕ್ಕೆ ಎರಡು ಮೂರು ಮಂದಿ ಸದಸ್ಯರ ಮಾಹಿತಿಯನ್ನಷ್ಟೆ ಆನ್‍ಲೈನ್‍ನಲ್ಲಿ ಕಳುಹಿಸಲು ಸಾಧ್ಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ, ನಿರ್ಬಂಧಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಿದರು.

ಮುಖ್ಯಮಂತ್ರಿಗೆ ಮನವಿ : ಜಿಲ್ಲೆಯ ಬೆಳೆÉಗಾರರು ಪ್ರಾಕೃತಿಕ ವಿಕೋಪ ಸೇರಿದಂತೆ ಎದುರಿಸುತ್ತಿರುವ ಸಂಕಷ್ಟಗಳಿಗೆ ಸಂಬಂಧಿಸಿದಂತೆ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವದೆಂದು ಮನು ಮುತ್ತಪ್ಪ ಅವರು ಇದೇ ಸಂದರ್ಭ ತಿಳಿಸಿದರು.ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಮನವಿಯಲ್ಲಿ ಪ್ರಮುಖವಾಗಿ, ಪ್ರಕೃತಿ ವಿಕೋಪಕ್ಕೆ ತುತ್ತಾದ ಗ್ರಾಮಗಳಲ್ಲಿ ಸಂಪೂರ್ಣ ಸಾಲವನ್ನು (ದೀರ್ಘಾವಧಿ ಸಾಲ, ಮಧ್ಯಮಾವಧಿ ಸಾಲ, ಅಲ್ಪಾವಧಿ ಸಾಲ) ಮನ್ನಾ ಮಾಡಬೇಕು, ಭೂಮಿ ಕಳೆದುಕೊಂಡವರಿಗೆ ಅಷ್ಟೇ ಜಾಗವು ಪೈಸಾರಿಯಲ್ಲಾದರೂ ಪರ್ಯಾ ಯವಾಗಿ ಸಿಗುವಂತಾಗಬೇಕು, ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಗಿಂತ ದುಪ್ಪಟ್ಟು ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರೈತರ ಬೆಳೆ ಸಾಲವನ್ನು ಮನ್ನಾ ಮಾಡಿ ಹೊಸ ಸಾಲವನ್ನು ಕೊಡುವಂತಾಗ ಬೇಕೆಂದು ಒತ್ತಾಯಿಸಲಾಗುವದು. ಇದರೊಂದಿಗೆ ಜಿಲ್ಲೆಯ ಎಲ್ಲಾ ಕೃಷಿಗೆ ಸಂಬಂಧಿಸಿದಂತೆ ಈ ಬಾರಿ ಎಲ್ಲಾ ವಿಧದ ಬೆಳೆ ಸಾಲಗಳನ್ನು ಮನ್ನಾ ಮಾಡಿ ಹೊಸದಾಗಿ ನೀಡುವಂತಾಗಬೇಕು ಹಾಗೂ ದೀರ್ಘಾವಧಿ ಸಾಲದ ಕಂತನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವಂತೆ ಮಾಡಬೇಕು, ಸಾಲಮನ್ನಾ ಮಾಡುವಾಗ ಈ ವರ್ಷದ ಮಟ್ಟಿಗೆ ಕೊಡಗಿಗೆ ಯಾವದೇ ಷರತ್ತುಗಳನ್ನು (ಆದಾಯ ತೆರಿಗೆ ಪಾವತಿಸಿದ ರೈತರು, ವೇತನ, ಪಿಂಚಣಿ ಪಡೆಯುವ ರೈತರು, ಇತರ ಅಡವು ಸಾಲಗಳನ್ನು ಹೊಂದಿರುವ ರೈತರು ಇತ್ಯಾದಿ) ವಿಧಿಸದೆ ಮಂಜೂರು ಮಾಡಬೇಕು, ಭೂಕುಸಿತದಿಂದ ಸ್ಥಳಾಂತರಗೊಂಡು ಬಾಡಿಗೆ ಮನೆಗಳಲ್ಲಿ ವಾಸಿಸುವ ರೈತರಿಗೆ ಆಶ್ವಾಸನೆಯಾಗಿದ್ದ ಮಾಸಿಕ 10 ಸಾವಿರ ರೂ. ಮೊತ್ತದ ಅನುಷ್ಠಾನ ಆಗಬೇಕೆಂದು ಒತ್ತಾಯಿಸಲಾಗುವದು. ಸುದ್ದಿಗೋಷ್ಠಿಯಲ್ಲಿ ಸಹಕಾರ ಯೂನಿಯನ್ ನಿರ್ದೇಶಕರುಗಳಾದ ರವಿ ಬಸಪ್ಪ, ಬಿದ್ದಾಟಂಡ ರಮೇಶ್ ಚಂಗಪ್ಪ ಹಾಗೂ ರಾಮಚಂದ್ರ ಉಪಸ್ಥಿತರಿದ್ದರು.