ಚೆಟ್ಟಳ್ಳಿ, ಡಿ. 13: ಮಡಿಕೇರಿ ಸಮೀಪದ ಅಟೇಕ್ ಬಾಯ್ಸ್ ಹಾಕತ್ತೂರು ವತಿಯಿಂದ 19 ವಯಸ್ಸಿನ ವಯೋಮಿತಿ ಒಳಗಿನ ಆಟಗಾರ ಕಾಲ್ಚೆಂಡು ಪಂದ್ಯಾಟದಲ್ಲಿ ಕೆ.ವೈ.ಸಿ. ಕೊಂಡಂಗೇರಿ ಪ್ರಥಮ ಸ್ಥಾನ ಪಡೆದರೆ, ಅತಿಥೇಯ ಹಾಕತ್ತೂರು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಹಾಕತ್ತೂರು ಎ ಹಾಗೂ ಹಾಕತ್ತೂರು ಬಿ ತಂಡಗಳ ನಡುವೆ ನಡೆಯಿತು. ಹಾಕತ್ತೂರು ಎ ತಂಡವು 2-1 ಗೋಲುಗಳ ಅಂತರದಿಂದ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕುಂಜಿಲ ತಂಡವನ್ನು ಕೆ.ವೈ.ಸಿ. ಕೊಂಡಂಗೇರಿ ತಂಡವು 3-2 ಗೋಲುಗಳ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.
ಪಂದ್ಯಾಟದಲ್ಲಿ 20 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಕೆ.ವೈ.ಸಿ. ತಂಡದ ವಾಜಿದ್ ಹಾಗೂ ಅತೀ ಹೆಚ್ಚು ಗೋಲು ಬಾರಿಸಿದ ಪ್ರಶಸ್ತಿಯನ್ನು ಕುಂಜಿಲ ತಂಡದ ಬಿಲಾಲ್ ಪಡೆದುಕೊಂಡರು.
ವಿಜೇತ ತಂಡಗಳಿಗೆ ಕೆ.ವೈ.ಸಿ. ಯುವಕ ಸಂಘದ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಸಂಸ್ಥಾಪಕ ಆಶಿಫ್(ಆಪು) ಶುಭ ಕೋರಿದರು.
ಈ ಸಂದರ್ಭ ಹಾಕತ್ತೂರು ಕ್ಲಬ್‍ನ ಪದಾಧಿಕಾರಿಗಳು ಇದ್ದರು.