ಮಡಿಕೇರಿ, ಡಿ. 13: ನ್ಯೂನ್ಯತೆಯಿಂದ ಕೂಡಿದ್ದ ವಾಹನ ಮಾರಾಟ ಮಾಡಿದ ಸಂಸ್ಥೆಯೊಂದಕ್ಕೆ ಇಲ್ಲಿನ ಗ್ರಾಹಕರ ವೇದಿಕೆ ದಂಡ ಸಹಿತ ವಾಹನದ ಬಾಬ್ತು ಗ್ರಾಹಕನಿಗೆ ವಾಪಸ್ ನೀಡುವಂತೆ ತೀರ್ಪು ನೀಡಿ ಆದೇಶಿಸಿದೆ.
ಬಿಳಿಗೇರಿ ಗ್ರಾಮದ ಮಂಞರ ಕುಟ್ಟಪ್ಪ ಅವರು 15.6.2017 ರಂದು ಮಡಿಕೇರಿಯ ಮಹೀಂದ್ರ ಅಂಡ್ ಮಹೀಂದ್ರಾ ಸಂಸ್ಥೆಯಿಂದ ಬೊಲೇರೋ ಪಿಕ್ಅಪ್ ವಾಹನ ಖರೀದಿಸಿದ್ದರು. ಖರೀದಿಸಿದ ಒಂದು ತಿಂಗಳ ಅವಧಿಯಲ್ಲಿ ವಾಹನದ ಚಾಸಿಸ್ನಲ್ಲಿ ಎಡ ಹಾಗೂ ಬಲ ಭಾಗದಲ್ಲಿ 15 ಮಿ.ಮೀ. ನಷ್ಟು ವ್ಯತ್ಯಾಸವಿರುವದು ಕಂಡುಬಂದಿದೆ. ಸಂಸ್ಥೆಗೆ ವಾಹನ ಕೊಂಡೊಯ್ದು ಪರಿಶೀಲಿಸಿದಾಗ ಸಂಸ್ಥೆಯವರು 7 ಮಿ.ಮೀ. ಮಾತ್ರ ವ್ಯತ್ಸಾಸವಿದೆ ಎಂದು ಹೇಳಿದ್ದಾರೆ.
ಕುಟ್ಟಪ್ಪ ಅವರು ರೂ. 7.886 ಲಕ್ಷ ಹಣ ನೀಡಿ ವಾಹನ ಖರೀದಿ ಸಿದ್ದು, ಬದಲೀ ವಾಹನ ನೀಡುವಂತೆ ಸಂಸ್ಥೆಯವರಲ್ಲಿ ಕೋರಿದ್ದಾರೆ. ಆದರೆ ಸಂಸ್ಥೆಯವರು ಬದಲೀ ವಾಹನ ನೀಡಲಾಗುವದಿಲ್ಲ. ಬದಲಿಗೆ ಚಾಸಿಸ್ ಬದಲಿಸಿ ಕೊಡುವದಾಗಿ ಹೇಳಿದ್ದಾರೆ. ಇದಕ್ಕೊಪ್ಪದ ಕುಟ್ಟಪ್ಪ ಸಂಸ್ಥೆಯ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದಾವೆ ಹೂಡಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಸಿ.ವಿ. ಮಾರ್ಗೂರ್ ಹಾಗೂ ಸದಸ್ಯ ಎಂ.ಸಿ. ದೇವಕುಮಾರ್ ಅವರುಗಳನ್ನೊಳಗೊಂಡ ಪೀಠವು ಗ್ರಾಹಕರು ದುಡಿದು ಸಂಪಾದಿಸಿದ ಹಣದಿಂದ ವಾಹನ ಖರೀದಿಸಿದ್ದು, ಚಾಸಿಸ್ ಬದಲಿಸಿದರೆ ವಾಹನದ ಹೊಸತನ ಇರುವದಿಲ್ಲ. ಅಲ್ಲದೆ ತಯಾರಿಕೆಯಲ್ಲಿ ನ್ಯೂನ್ಯತೆಯಿರುವ ವಾಹನ ಮಾರಾಟ ಮಾಡಿರುವದ ರಿಂದ ಸಂಸ್ಥೆಯು ಗ್ರಾಹಕ ಕುಟ್ಟಪ್ಪ ಅವರಿಗೆ ವಾಹನ ಖರೀದಿಸಿದಲ್ಲಿಂದ ಇದುವರೆಗಿನ ಅವಧಿಗೆ ಶೇ. 10 ರಷ್ಟು ಬಡ್ಡಿ ದರದೊಂದಿಗೆ ರೂ. 7.886 ಲಕ್ಷ ಹಿಂತಿರುಗಿಸಬೇಕು. ಅಲ್ಲದೆ ಮಾನಸಿಕವಾಗಿ ತೊಂದರೆ ನೀಡಿದಕ್ಕಾಗಿ ರೂ. 1 ಲಕ್ಷ ಪರಿಹಾರ ನೀಡಬೇಕು. ಜೊತೆಗೆ ನ್ಯಾಯಾಲಯದ ಶುಲ್ಕ ರೂ. 15 ಸಾವಿರ ಪಾವತಿಸಬೇಕೆಂದು ತೀರ್ಪು ನೀಡಿದೆ.
ತಾ. 1 ರಂದು ಈ ತೀರ್ಪು ನೀಡಿದ್ದು, ತೀರ್ಪು ಹೊರಬಿದ್ದ ನಂತರದ 2 ತಿಂಗಳ ಒಳಗಡೆ ಪಾವತಿ ಮಾಡ ಬೇಕೆಂದು ತೀರ್ಪಿನಲ್ಲಿ ಆದೇಶಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಎಂ.ಎ. ನಿರಂಜನ್ ವಾದ ಮಂಡಿಸಿದ್ದರು.