ಮಡಿಕೇರಿ, ಡಿ. 13: ಜಿಲ್ಲೆಯಲ್ಲಿ ಕೆಲವು ತಿಂಗಳ ಹಿಂದೆ ಸಂಭವಿಸಿದ ಪ್ರಾಕೃತಿಕ ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಾದ ಜನತೆಗೆ ಸರಕಾರದಿಂದ ಅಗತ್ಯ ಸೌಲಭ್ಯಗಳು, ತುರ್ತು ಅಗತ್ಯತೆಗಳು ತ್ವರಿತಗತಿಯಲ್ಲಿ ಸಿಗಬೇಕಿದೆ. ಈ ಬಗ್ಗೆ ಸರಕಾರ ತಕ್ಷಣ ಸ್ಪಂದಿಸಬೇಕಾಗಿದೆ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಒತ್ತಾಯಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅಪ್ಪಚ್ಚು ರಂಜನ್ ಅವರು ಅಗತ್ಯತೆಗಳ ಬಗ್ಗೆ ಗಮನ ಸೆಳೆದರಲ್ಲದೆ, ಉಂಟಾಗಿರುವ ಸಮಸ್ಯೆಗಳನ್ನು ಸದನದಲ್ಲಿ ಮುಂದಿಟ್ಟರು.
ಜಲಪ್ರಳಯದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಸಂಬಂಧಿಸಿದ ಸಚಿವರು, ಅಧಿಕಾರಿ ವರ್ಗ, ನೆರವು ನೀಡಿದ ಸಂಘ-ಸಂಸ್ಥೆಗಳು, ದಾನಿಗಳು, ರೂ.100 ಕೋಟಿ ನೆರವು ನೀಡಿದ ಸರಕಾರಿ ನೌಕರರು ಸೇರಿದಂತೆ ಕೊಡಗು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅಭಿನಂದನೆ ಸಲ್ಲಿಸಿದ ಶಾಸಕರು ಬಳಿಕ ಈಗಿನ ವಾಸ್ತವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ತುರ್ತಾಗಿ ಮನೆ ನಿರ್ಮಾಣ ವಾಗಬೇಕು. ಅಲ್ಲದೆ, ಜಾಗ ಕಳೆದುಕೊಂಡಿರುವವರಿಗೆ ಇನ್ನೂ ಪರಿಹಾರ ಲಭಿಸಿಲ್ಲ. ಇವರಿಗೆ ಸಿ ಮತ್ತು ಡಿ ಜಾಗಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ ಅವರು, ನಿರಾಶ್ರಿತರ ಮಕ್ಕಳ ಶಿಕ್ಷಣದ ವೆಚ್ಚವನ್ನು ಸರಕಾರ ಭರಿಸಬೇಕು. ಕಾಫಿ ಬೆಳೆಗಾರರು, ರೈತರ ಸಾಲ ಮನ್ನಾ ಮಾಡಿ ದುರಂತ ಸಂಭವಿಸಿದ ಏಳು ಪಂಚಾಯಿತಿಗಳ ಜನತೆಗೆ ಬಿ.ಪಿ.ಎಲ್. ಸೌಲಭ್ಯ ಒದಗಿಸಬೇಕು. ದುರಂತದ ಬಳಿಕ ರಸ್ತೆಗಳನ್ನು ತಾತ್ಕಾಲಿಕವಾಗಿ ಮಾತ್ರ ಸರಿಪಡಿಸಲಾಗಿದೆ. ಇದನ್ನು ಸಮರ್ಪಕಗೊಳಿಸುವ ಕಾರ್ಯ ಅಗತ್ಯವಿದೆ. ಕೋಟ್ಯಾಂತರ ರೂ.ಗಳ ನಷ್ಟ ರಸ್ತೆ ಹಾನಿಯಿಂದ ಸಂಭವಿಸಿದ್ದು, ರಸ್ತೆ ಅಭಿವೃದ್ಧಿಗಾಗಿಯೇ ಪ್ರತ್ಯೇಕವಾಗಿ ರೂ. 100 ಕೋಟಿ ಒದಗಿಸಬೇಕು ಎಂದು ಆಗ್ರಹಿಸಿದ ಶಾಸಕರು, ಗುಡ್ಡಗಳು ಬಿರುಕು ಬಿಟ್ಟಿರುವದರಿಂದ ಸಾಕಷ್ಟು ಮನೆಗಳು ವಾಸಯೋಗ್ಯ ವಾಗಿಲ್ಲ. ಜನತೆ ಚಿನ್ನಾಭರಣಗಳು ಸೇರಿದಂತೆ, ತಮ್ಮ ಅಗತ್ಯ ದಾಖಲಾತಿ ಗಳನ್ನು ಕಳೆದುಕೊಂಡಿದ್ದು, ಈ ಬಗ್ಗೆಯೂ ಗಮನ ಹರಿಸಬೇಕಿದೆ ಎಂದರು.
ಭೂಕುಸಿತದಿಂದ ಹಾನಿಯಾ ಗಿರುವ ಸ್ಥಳಕ್ಕೆ ವಿಜ್ಞಾನಿಗಳನ್ನು ಕರೆಸಿ ಇಲ್ಲಿ ಭವಿಷ್ಯದಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು ಎಂಬ ಮಾಹಿತಿ ಒದಗಿಸಬೇಕು. ಕಾಫಿ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಗೊಬ್ಬರ, ಕೀಟನಾಶಕ ಇತ್ಯಾದಿಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದ ರಂಜನ್ ಬೆಟ್ಟ ಕುಸಿತದಿಂದ ರೈತರ ಜಮೀನುಗಳಲ್ಲಿದ್ದ ಮರಗಳು ಧರಾಶಾಹಿಯಾಗಿದ್ದು, ಟಿಂಬರ್ ಯಾರ್ಡ್‍ನಂತೆ ಪರಿವರ್ತನೆಯಾಗಿದೆ. ಇಲ್ಲಿನ ಮರಗಳ ಮೌಲ್ಯವನ್ನು ಅರಣ್ಯ ಇಲಾಖೆ ಮೂಲಕ ರೈತರಿಗೆ ನೀಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸುಮಾರು 20 ನಿಮಿಷಗಳ ಕಾಲ ಸದನದಲ್ಲಿ ಗಮನ ಸೆಳೆದು ಸರಕಾರವನ್ನು ಆಗ್ರಹಿಸಿದರು.