ವಿಶೇಷ ವರದಿ : ರಜಿತಾ ಕಾರ್ಯಪ್ಪ
ವೀರಾಜಪೇಟೆ, ಡಿ. 13: ಕಳೆದ ಸಾಲಿನಲ್ಲಿನ ಮಳೆಯಲ್ಲಿ ಕುಸಿದ ಮಾಕುಟ್ಟ ರಸ್ತೆಯಲ್ಲಿ ಇಂದು ಬಹುತೇಕ ಎಲ್ಲ ರೀತಿಯ ವಾಹನ ಸಂಚಾರ ನಡೆಯುತ್ತಿದೆ. ಇದು ಸಾರ್ವಜನಿಕ ಹಿತ ದೃಷ್ಟಿಯಿಂದ ಒಳ್ಳೆಯದೇ ಆಗಿದೆ. ಕೆಲವು ತಿಂಗಳ ಕಾಲ ಈ ರಸ್ತೆ ವಾಹನ ಸಂಚಾರವಿಲ್ಲದೆ ಜನರಿಗೆ ತೀವ್ರ ತೊಂದರೆ ಆಗಿತ್ತು. ಆದರೆ ಇಂದು ಕುಸಿದ ಸ್ಥಳದಲ್ಲಿ ತಾತ್ಕಾಲಿಕ ತಡೆ ಗೋಡೆ ಏನಾಗಿದೆ ಎಂದು ಜಿಲ್ಲಾಡಳಿತ ಪರಿಶೀಲನೆ ಮಾಡಬೇಕಾಗಿದೆ.
ಕಳೆದ ಸಾಲಿನ ಮಳೆಗೆ ಜೂನಲ್ಲಿ ವೀರಾಜಪೇಟೆ ಮಾಕುಟ್ಟ ಕೇರಳ ಅಂತರಾಜ್ಯ ಹೆದ್ದಾರಿಯ ಘಾಟಿ ರಸ್ತೆಯಲ್ಲಿ ಭೂಕುಸಿತವಾಗಿತ್ತು. ಹೊಸ ಕಣಿವೆ ಸೃಷ್ಟಿಯಾಗಿ ನೀರು ಹರಿದು ರಸ್ತೆಯ ಪಾಶ್ರ್ವ ಕುಸಿದಿತ್ತು, ಪಕ್ಕದಲ್ಲಿ ರಸ್ತೆ ಅಂಚಿನಿಂದಲೇ ಪ್ರಪಾತದವರೆಗೆ ಬಾರಿ ಭೂಕುಸಿತವಾಗಿತ್ತು; ಮತ್ತೊಂದು ಕಡೆಯೂ ಇದೆ ಕಥೆ. ಇನ್ನು ಮಾಕುಟ್ಟ ಅಂಬು ಹೊಟೇಲ್ ಸಮೀಪ ಅರಣ್ಯದಲ್ಲಿ ಕಡಿದ ಮರಗಳು ನೀರಿನಲ್ಲಿ ಬಂದು ಸೇತುವೆಗೆ ಅಡ್ಡಲಾಗಿ ನಿಂತಿವೆ. ಪರಿಣಾಮ ನೀರು ರಸ್ತೆ ಮೇಲೆ ಹರಿದ ಕಾರಣ ಸೇತುವೆಯ ಬದಿ ರಸ್ತೆಯ ಅಂಚಿನಿಂದ ಕೊಚ್ಚಿಹೋಗಿತ್ತು. ಅನಂತರದ ದಿನದಲ್ಲಿ ಇದಕ್ಕೆ ಮರಳು ತುಂಬಿದ ಚೀಲಗಳನ್ನು ಇಟ್ಟು ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು. ಇದರಿಂದ ಬಸ್ಸುಗಳು, ಸಣ್ಣ ಲಾರಿಗಳು ಓಡಾಟ ಆರಂಭಿಸಿದ್ದವು. ಈಗ ಹಲವು ವಾಹನಗಳಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಭಾರೀ ತೂಕದ ಸರಕುಗಳ ಲಾರಿ ರಾತ್ರಿ ಸಂಚರಿಸುತ್ತಿರುವ ಮಾಹಿತಿ ಲಭ್ಯವಾಗಿದೆ.
ಆದರೆ ಪ್ರಶ್ನೆ ಈ ರಸ್ತೆ ಎಷ್ಟು ಸುರಕ್ಷ ಎಂಬದು, ಕಾರಣ ಅಂಬು ಹೊಟೇಲ್ ಬಳಿ ಮರಳು ಚೀಲದ ತಾತ್ಕಾಲಿಕ ತಡೆ ಗೋಡೆ ಅಪಾಯದಲ್ಲಿದೆ. ಅದರ ಚೀಲಗಳು ಬಹುತೇಕ ಹರಿದು ಹೋಗಿ ಮರಳು ಸೋರುತ್ತಿದ್ದು , ಮಳೆ ಬಂದರೆ ಮತ್ತೆ ಹೊಳೆಯ ಪಾಲಾಗುವದು ನಿಶ್ಚಿತ. ಈ ರೀತಿ ದುಸ್ಥಿತಿಗೆ ಬಂದಿರುವ ರಸ್ತೆಯಲ್ಲಿ ಸಿಕ್ಕ ವಾಹನಗಳಿಗೆ ಮುಕ್ತ ಅವಕಾಶ ನೀಡಿದರೆ ಮುಂದೆ ಆಗುವ ಅನಾಹುತಕ್ಕೆ ಯಾರು ಹೊಣೆ. ಜಿಲ್ಲಾಡಳಿತ ಇದನ್ನು ಪರಿಶೀಲಿಸಬೇಕು.
ಇದೀಗ ಕೇರಳದ ಕಣ್ಣೂರಿನಲ್ಲಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿದ್ದು, ಕೊಡಗಿಗೆ ಹತ್ತಿರವಾದ ವಿಮಾನ ನಿಲ್ದಾಣವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ರಸ್ತೆಯಲ್ಲಿ ವಾಹನಗಳ ಓಡಾಟ ಜಾಸ್ತಿಯಾಗುತ್ತದೆ. ರಸ್ತೆ ಕೂಡ ಕಿರಿದಾಗಿರುವದರಿಂದ ಆದಷ್ಟು ಬೇಗೆ ದುರಸ್ತ್ತಿಯಾಗದೆ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಜಿಲ್ಲಾಡಳಿತ ಇದನ್ನು ತಕ್ಷಣ ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ ಖಾಯಂ ತಡೆಗೋಡೆ ಆಗುವವರೆಗೆ ಭಾರೀ ವಾಹನಗಳಿಗೆÀ ಅವಕಾಶ ನೀಡುವ ಬಗ್ಗೆ ಪುನರ್ ಪರಿಶೀಲಿಸಬೇಕು.