ಮಡಿಕೇರಿ, ಡಿ. 13: ಮಡಿಕೇರಿಯ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಕೊಡಗು ಜಿಲ್ಲಾ ಲೇಖಕ ಹಾಗೂ ಕಲಾವಿದರ ಬಳಗದಿಂದ ಹಮ್ಮಿಕೊಂಡಿರುವ ಕೊಡಗಿನ ಹೆಸರಾಂತ ಕೃತಿಕಾರರ ಸಾಹಿತ್ಯ ಸಂವಾದ ಸರಣಿ ಕಾರ್ಯಕ್ರಮದ ಮೊದಲನೇ ಆವೃತಿಯಲ್ಲಿ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿಗಳಾಗಿದ್ದು, ಇತ್ತೀಚೆಗೆ ಇಹಲೋಕ ತ್ಯಜಿಸಿದ ಶ್ರೀ ಜಗದಾತ್ಮಾನಂದಜೀ ಮಹಾರಾಜರ ‘ಬದುಕಲು ಕಲಿಯಿರಿ’ ಪುಸ್ತಕದ ವ್ಯಾಖ್ಯಾನ ನಡೆಯಿತು.
ಕಾರ್ಯಕ್ರಮದಲ್ಲಿ ಪುಸ್ತಕದ ಬಗ್ಗೆ ಉಪನ್ಯಾಸ ನೀಡಿದ ಗೋಣಿಕೊಪ್ಪಲಿನ ಉದ್ಯಮಿ ಚಂದನ್ಕಾಮತ್ ಅವರು ಸ್ವಪ್ರೇಮದೊಂದಿಗೆ ಸಮಾಜ ಹಾಗೂ ರಾಷ್ಟ್ರ ಪ್ರೇಮವನ್ನು ಸಾರುವ ಕೃತಿ ‘ಬದುಕಲು ಕಲಿಯಿರಿ’ ಎಂದು ಅಭಿಪ್ರಾಯಪಟ್ಟರು. 1981 ರಲ್ಲಿ ಮೊದಲನೇ ಬಾರಿಗೆ ಪ್ರಕಟವಾದ ಈ ಕೃತಿಯು ಮನುಷ್ಯನ ಮನಸ್ಸಿನ ಅನೇಕ ಗುಣಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಅವನ ಸರ್ವತೋಮುಖ ಬೆಳವಣಿಗೆಯ ಮಾರ್ಗವನ್ನು ಹಾಕಿಕೊಡುವಲ್ಲಿ ಯಶಸ್ವಿಯಾಗಿದೆ. ಹಾಸ್ಯ ಚಟಾಕಿಯೊಂದಿಗೆ ಅನೇಕ ವಿಚಾರಗಳನ್ನು ಓದುಗರ ಮುಂದೆ ಇಡುವ ಈ ಕೃತಿ ಆತನನ್ನು ಆತ್ಮಾವಲೋಕನಕ್ಕೆ ಒಳಪಡಿಸುತ್ತದೆ. ಇಂತಹ ಕೃತಿ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗುವದಂತೂ ಖಂಡಿತ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮಾತನಾಡಿದ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದಜೀಯವರು, ‘ಬದುಕಲು ಕಲಿಯಿರಿ’ ಪುಸ್ತಕದಲ್ಲಿರುವ ಏಳು ಅಧ್ಯಾಯಗಳು ಏಳು ಬಣ್ಣದ ಕಿರಣಗಳು ಒಟ್ಟು ಸೇರಿ ಬೆಳಕು ಬಂದಂತೆ ನಮ್ಮ ಜೀವನವನ್ನು ರೂಪಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಸದರಿ ಕೃತಿಯಿಂದ ಪ್ರಭಾವಿತರಾಗಿ ಅನೇಕ ವ್ಯಕ್ತಿಗಳು ತಮ್ಮ ಜೀವನದಲ್ಲಿ ಗೆಲುವನ್ನು ಸಾಧಿಸಿರುವ ಬಗ್ಗೆ ನಿದರ್ಶನಗಳನ್ನು ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಜಿಲ್ಲಾ ಲೇಖಕ ಹಾಗೂ ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಕೊಡಗಿನ ಜನತೆಯಲ್ಲಿ ಹಾಗೂ ಮುಖ್ಯವಾಗಿ ಯುವ ಪೀಳಿಗೆ-ವಿದ್ಯಾರ್ಥಿಗಳಲ್ಲಿ ಕೊಡಗಿನ ಅನೇಕ ಸಾಹಿತಿಗಳು ಬರೆದಂತಹ ಕೃತಿಗಳನ್ನು ಪರಿಚಯಿಸಿ ಅಭಿರುಚಿಯನ್ನು ತರುವ ನಿಟ್ಟಿನಿಂದ ‘ಸಾಹಿತ್ಯ ಸಂವಾದ’ ಎನ್ನುವ ಸರಣಿಯನ್ನು ಆರಂಭಿಸಿರುವದಾಗಿ ತಿಳಿಸಿದರು.
ಸಭೆಯಲ್ಲಿ ಮಡಿಕೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಹಾಗೂ ಕೊಡಗು ಜಿಲ್ಲಾ ಲೇಖಕ ಕಲಾವಿದರ ಬಳಗದ ಮಾಜಿ ಕಾರ್ಯಾಧ್ಯಕ್ಷ ಲೋಕನಾಥ್ ಅಮೆಚೂರ್ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎನ್.ಎಸ್. ಚಿದಾನಂದ, ಲಿಟ್ಲ್ ಫ್ಲವರ್ ಶಾಲೆಯ ಮುಖ್ಯೋಪಾಧ್ಯಾಯಿನಿ ಸುನಿತಾ ಪ್ರೀತು, ಹಿರಿಯರಾದ ಟಿ.ಪಿ. ರಮೇಶ್, ಬಿ.ಎ. ಷಂಶುದ್ದೀನ್, ಲಿಯಾಕತ್ ಅಲಿ, ಬಿ.ಎನ್. ಮನುಶೆಣೈ, ರಾಜೇಶ್ ಪದ್ಮನಾಭ, ಬಿ.ಆರ್. ಜೋಯಪ್ಪ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಮುನೀರ್ಅಹಮದ್ ನೆರವೇರಿಸಿದರೆ, ಎಂ.ಇ. ಮೊಹಿದ್ದೀನ್ ಸ್ವಾಗತಿಸಿ, ಉಪನ್ಯಾಸಕ ನಂದೀಶ್ ವಂದಿಸಿದರು.