ಮಡಿಕೇರಿ, ಡಿ. 13: ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್‍ನಿಂದ ಅಲ್ಪಾವಧಿ ಸಾಲ ಪಡೆದು ಪ್ರಸಕ್ತ ಸಾಲಿನ ಜು.10ಕ್ಕೆ ಹೊರಬಾಕಿ ಉಳಿಸಿಕೊಂಡ ಎಲ್ಲಾ ರೈತರ ಗರಿಷ್ಠ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡುವದಾಗಿ ಸರಕಾರ ಘೋಷಿಸಿದೆ. ಆದರೆ ಈ ಸಂಬಂಧ ರೈತರು ನೀಡಬೇಕಾಗಿರುವ ಸ್ವಯಂ ದೃಢೀಕರಣ ಪತ್ರವನ್ನು ತಂತ್ರಾಂಶದಲ್ಲಿ ಅಳವಡಿಸುವ ಸಂದರ್ಭ ಹಲವಾರು ತೊಡಕುಗಳು ಉಂಟಾಗುತ್ತಿದ್ದು, ಜಿಲ್ಲೆಯ ರೈತರಿಗೆ ಸಾಲಮನ್ನಾ ಯೋಜನೆಯ ಫಲ ದೊರಕ ದಂತಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ)ಬ್ಯಾಂಕ್ ನ ಅಧ್ಯಕ್ಷ ಬಿ.ಡಿ.ಮಂಜುನಾಥ್ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಜಿಲ್ಲೆ ಎಂದು ಘೋಷಿಸಿರುವದರಿಂದ ಜಿಲ್ಲೆಯ ಮಟ್ಟಿಗೆ ಯಾವದೇ ನಿರ್ಬಂಧಗಳನ್ನು ವಿಧಿಸದೆ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು ಮತ್ತು ಹೊರಬಾಕಿ ಉಳಿಸಿಕೊಂಡಿರುವ ರೈತರ ಸಾಲವನ್ನು ಪರಿವರ್ತನೆ ಸಂಬಂಧ ಬ್ಯಾಂಕ್‍ಗಳಿಗೆ ಹಲವು ತೊಡಕುಗಳು ಉಂಟಾಗುತ್ತಿದ್ದು, ಇವುಗಳನ್ನು ನಿವಾರಣೆ ಮಾಡಿಕೊಡ ಬೇಕು ಎಂದು ಆಗ್ರಹಿಸಿದರು.

ಸರಕಾರದ ನಿಯಮಾನುಸಾರ ಒಂದು ಲಕ್ಷಕ್ಕಿಂತ ಹೆಚ್ಚಿನ ಸಾಲ ಹೊಂದಿರುವ ರೈತರು ಒಂದು ಲಕ್ಷಕ್ಕಿಂತ ಮೇಲ್ಪಟ್ಟ ಮೊತ್ತವನ್ನು ವಾಯಿದೆಯೊಳಗೆ ಕಡ್ಡಾಯವಾಗಿ ಮರುಪಾವತಿಸಿರಬೇಕು. ಅಲ್ಲದೆ ಜು. 10ಕ್ಕೆ ವಾಯಿದೆ ಮೀರಿದ ಸಾಲಗಾರರಾಗಿದ್ದು, ಒಂದು ಲಕ್ಷಕ್ಕಿಂತ ಹೆಚ್ಚಿನ ಸಾಲ ಹೊಂದಿದ್ದಲ್ಲಿ ಒಂದು ಲಕ್ಷಕ್ಕಿಂತ ಮೇಲ್ಪಟ್ಟ ಸಾಲ ಮತ್ತು ಬಡ್ಡಿಯನ್ನು 2019ರ ಮಾ.31ರೊಳಗೆ ಮರು ಪಾವತಿಸಬೇಕು. ಪತಿ, ಪತ್ನಿ ಹಾಗೂ ಅವಲಂಬಿತ ಮಕ್ಕಳು ಇರುವ ಕುಟುಂಬಕ್ಕೆ ಮಾತ್ರ ಸಾಲ ಮನ್ನಾ ಯೋಜನೆ ಅನ್ವಯವಾಗಲಿದ್ದು, ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಮತ್ತು 20ಸಾವಿರ ರೂ.ಗಳಿಗಿಂತ ಮೇಲ್ಪಟ್ಟು ಪಿಂಚಣಿ ಪಡೆಯುವ ರೈತರು ಈ ಯೋಜನೆಗೆ ಅರ್ಹರಾಗುವದಿಲ್ಲ ಎಂದು ಮಂಜುನಾಥ್ ವಿವರಿಸಿದರು.

ಈ ಯೋಜನೆಯ ಸೌಲಭ್ಯ ಪಡೆಯಲು ಪ್ರತಿಯೊಬ್ಬ ಫಲಾನುಭವಿ ರೈತ ಸ್ವಯಂ ದೃಢೀಕರಣ ಪತ್ರವನ್ನು ಸಲ್ಲಿಸಬೇಕಿದ್ದು, ಇದು ಅತ್ಯಂತ ಕಷ್ಟದ ಕೆಲಸವಾಗಿದೆ. ಜಿಲ್ಲೆಯಲ್ಲಿ ಅವಿಭಕ್ತ ಕುಟುಂಬದ ಹೆಸರಿನಲ್ಲೇ ಭೂ ದಾಖಲೆಗಳು ಇಂದಿಗೂ ಮುಂದು ವರಿದಿರುವದರಿಂದ ಸ್ವಯಂ ದೃಡೀಕರಣ ಪತ್ರ ಸಲ್ಲಿಸುವದು ಅಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕಳೆದ ಜು.10ಕ್ಕೆ ಅನ್ವಯವಾಗು ವಂತೆ ಕೊಡಗು ಜಿಲ್ಲೆಯುಲ್ಲಿ 32,976ಮಂದಿ ರೈತರು ಸಹಕಾರ ಸಂಘಗಳು ಮತ್ತು ಡಿಸಿಸಿ ಬ್ಯಾಂಕ್‍ನಿಂದ 48,943.67 ಲಕ್ಷ ರೂ.ಗಳ ಸಾಲ ಪಡೆದಿದ್ದು, ಇವರಲ್ಲಿ 219 ರೈತರು ಓವರ್‍ಡ್ಯೂ ಸಾಲ ಹೊಂದಿದ್ದಾರೆ. ಇವರ ಸಾಲದ ಮೊತ್ತ 426.96 ಲಕ್ಷ ರೂ.ಗಳಾಗಿದ್ದು, ಜಿಲ್ಲೆಯಲ್ಲಿ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಸೌಲಭ್ಯ ಪಡೆಯುವ ರೈತರ ಒಟ್ಟು ಮೊತ್ತ 25,481.96 ಲಕ್ಷ ರೂ.ಗಳಾಗಿದೆ. ಆದರೆ 32976 ರೈತರ ಮಾಹಿತಿಯನ್ನು ಸರಕಾರ ನಿಗದಿ ಪಡಿಸಿದ ಸಾಲ ಮನ್ನಾ ತಂತ್ರಾಂಶದಲ್ಲಿ ಅಳವಡಿಸಲಾಗಿದ್ದರೂ, ಈ ಪೈಕಿ 27,285 ರೈತರ ಆಧಾರ್ ಪರಿಶೀಲನೆ ಕ್ರಮಬದ್ಧವಾಗಿದೆ. ಅಲ್ಲದೆ 19982 ರೈತರ ಪಡಿತರ ಚೀಟಿ ಮತ್ತು 14046 ರೈತರ ಭೂ ದಾಖಲೆಗಳು ಮಾತ್ರ ಕ್ರಮಬದ್ಧವಾಗಿದೆ.ಈ ಮಾಹಿತಿಯನ್ನು ತಂತ್ರಾಂಶಕ್ಕೆ ಅಳವಡಿಸಲು ಸಹಕಾರ ಸಂಘಗಳ ಹಾಗೂ ಡಿಸಿಸಿ ಬ್ಯಾಂಕ್‍ನ ಸಿಬ್ಬಂದಿ ಗಳು ಹಗಲಿರುಳು ಶ್ರಮವಹಿಸಿದರೂ ತಾಂತ್ರಿಕ ಕಾರಣಗಳಿಂದಾಗಿ ಅದು ಅಳವಡಿಕೆಯಾಗುತ್ತಿಲ್ಲ ಎಂದು ಮಂಜುನಾಥ್ ದೂರಿದರು.

ಸರಕಾರದ ನಿಯಮಾನುಸಾರ ನವೆಂಬರ್ ಅಂತ್ಯದವರೆಗೆ ಜಿಲ್ಲೆಯ 1015 ರೈತರ ಮಾಹಿತಿಯನ್ನಷ್ಟೇ ಅಳವಡಿಸಲು ಸಾಧ್ಯವಾಗಿದ್ದು, ಇವರಿಗೆ ಸುಮಾರು 762.59 ಲಕ್ಷ ರೂ.ಗಳ ಸಾಲ ಮನ್ನಾ ದೊರಕಬೇಕಿತ್ತು. ಆದರೆ ಇದುವರೆಗೆ ಕೇವಲ 7 ರೈತರ 4.93 ಲಕ್ಷ ರೂ.ಗಳು ಮಾತ್ರ ಮನ್ನಾ ಆಗಿ ಫಲಾನುಭವಿಗಳ ಖಾತೆಗೆ ಜಮಾ ಆಗಿದ್ದು, ಉಳಿದ 1008 ಮಂದಿ ಸಾಲ ಮನ್ನಾ ಯೋಜನೆಯಿಂದ ವಂಚಿತರಾಗಿದ್ದಾರೆ. ಇದನ್ನು ಗಮನಿಸಿದರೆ ಕೊಡಗು ಜಿಲ್ಲೆಯ ಮಟ್ಟಿಗೆ ಸರಕಾರದ ಸಾಲ ಮನ್ನಾ ಯೋಜನೆ ನಿಷ್ಪ್ರಯೋಜಕವಾಗಿದೆ ಎಂದು ಮಂಜುನಾಥ್ ವಿಷಾದಿಸಿ ದರು.

ಸರಕಾರದ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ರೈತರು ಸಹಕಾರ ಸಂಘಗಳು ಮತ್ತು ಡಿಸಿಸಿ ಬ್ಯಾಂಕ್‍ಗಳಲ್ಲಿ ವಿಚಾರಿಸುತ್ತಿದ್ದು, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿಬ್ಬಂದಿಗಳಿಂದಾಗಲಿ, ಆಡಳಿತ ಮಂಡಳಿಯವರಿಂದಾಗಲಿ ಸಾಧ್ಯವಾಗುತ್ತಿಲ್ಲ. ಗೊಂದಲಗಳ ಬಗ್ಗೆ ಸ್ಪಷ್ಟೀಕರಣ ಪಡೆಯಲು ಸಹಕಾರ ಇಲಾಖೆಯ ಅಧಿಕಾರಿಗಳೂ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಸಾಲ ಮನ್ನಾ ಯೋಜನೆಗೆ ಗೊಂದಲ ಮಯವಾಗಿದ್ದು, ಇದರಿಂದಾಗಿ ಸಹಕಾರ ಸಂಸ್ಥೆಗಳು ನಷ್ಟ ಅನುಭವಿಸು ವಂತಾಗಿದೆ ಎಂದು ಹೇಳಿದರು.

ಈ ಹಿಂದಿನ ಸರಕಾರದ ಸಾಲ ಮನ್ನಾ ಯೋಜನೆಯಡಿ ಕೊಡಗು ಜಿಲ್ಲೆಯ 33,562 ರೈತ ಫಲಾನುಭವಿಗಳಿಗೆ 150.07 ಕೋಟಿ ಅಸಲು ಮನ್ನಾ ಸೌಲಭ್ಯ ದೊರೆತಿದೆ. ಈ ಪೈಕಿ ಸರಕಾರಕ್ಕೆ ಕ್ಲೇಂ ಬಿಲ್‍ಗಳನ್ನು ಸಲ್ಲಿಸಲಾಗಿದ್ದರೂ, ಇದುವರೆಗೆ ಕೇವಲ 140.16 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಉಳಿದ 9.91ಕೋಟಿ ರೂ. ಬಿಡುಗಡೆಗೆ ಬಾಕಿಯಿದೆ. ಸಾಲ ಮನ್ನಾ ಯೋಜನೆ ಯಡಿ ಪ್ರಯೋಜನ ಪಡೆದ ಫಲಾನುಭವಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರ ಸಂಸ್ಥೆಗಳು ತನ್ನ ಸ್ವಂತ ಬಂಡವಾಳದಿಂದ ಸಂಪೂರ್ಣ ಮೊತ್ತ ಭರಿಸುವ ಮೂಲಕ ಹಿಂದಿನ ಸಾಲದ ಮಿತಿಯಷ್ಟೇ ಸಾಲವನ್ನು ರೈತರಿಗೆ ವಿತರಿಸಿದ್ದರೂ, ಈ ಮೊತ್ತ ಸಂಸ್ಥೆಗಳಿಗೆ ಬಾರದೆ ಸಂಸ್ಥೆಗಳಿಗೆ ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿದ ಅವರು, ಈ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದೂ ಮಂಜುನಾಥ್ ಆಗ್ರಹಿಸಿದರು.

ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‍ನಿಂದ ಈ ಹಿಂದಿನಿಂದಲೂ ನೀಡಲಾಗುತ್ತಿದ್ದ ಶೇ.5.20ರ ಬಡ್ಡಿ ದರದ ಅಲ್ಪಾವಧಿ ಬೆಳೆ ಸಾಲದ ಮೇಲಿನ ಪುರ್ನಧನ ಸಾಲ ಸೌಲಭ್ಯದ ಮಿತಿಯನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡಲಾಗುತ್ತಿದ್ದು, ಕಳೆದ ಸಾಲದ ಮಿತಿ ಮಂಜೂರಾತಿಗೆ ಹೋಲಿಸಿದಲ್ಲಿ ಸುಮಾರು 50 ಕೋಟಿ ರೂ.ಗಳ ಸಾಲ ಮಂಜೂರಾತಿ ಕಡಿಮೆಯಾಗಿದೆ. ಇದಲ್ಲದೆ ಸಾಲ ಮನ್ನಾ ಅವಧಿಯಲ್ಲಿನ ಶೂನ್ಯ ಬಡ್ಡಿದರದ ಅಲ್ಪಾವಧಿ ಬೆಳೆ ಸಾಲದ ಮೇಲಿನ ವ್ಯತ್ಯಾಸದ ಬಡ್ಡಿ ಸಹಾಯಧನ ಬಾಪ್ತು ಸುಮಾರು 30.73 ಕೋಟಿ ರೂ. ಮೊತ್ತವನ್ನು ಇದುವರೆಗೂ ಬಿಡುಗಡೆ ಮಾಡದಿರುವ ದರಿಂದ ರೈತರಿಗೆ ಹೊಸ ಹಾಗೂ ಹೆಚ್ಚುವರಿ ಸಾಲ ನೀಡಲು ಡಿಸಿಸಿ ಬ್ಯಾಂಕ್ ಮತ್ತು ಪ್ಯಾಕ್ಸ್‍ಗಳಿಗೆ ಬಂಡವಾಳದ ಕೊರತೆ ಉಂಟಾಗುತ್ತಿದೆ ಎಂದು ಆರೋಪಿಸಿದ ಮಂಜುನಾಥ್, ಈ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ಉಪಾಧ್ಯಕ್ಷ ಹರೀಶ್ ಪೂವಯ್ಯ, ನಿರ್ದೇಶಕರಾದ ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಎನ್.ಕೊಮಾರಪ್ಪ, ಕನ್ನಂಡ ಸಂಪತ್ ಹಾಗೂ ಪ್ರಬಾರ ಪ್ರಧಾನ ವ್ಯವಸ್ಥಾಪಕ ನಟರಾಜ್ ಹಾಜರಿದ್ದರು.