ಮಡಿಕೇರಿ, ಡಿ. 13: ಮಡಿಕೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿ ಹಾಗೂ ವಕೀಲರೊಬ್ಬರ ಎಟಿಎಂ ರಹಸ್ಯ ಸಂಖ್ಯೆಗಳ ದುರ್ಬಳಕೆಯೊಂದಿಗೆ ಹಣ ಲಪಟಾಯಿಸಿರುವ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ತನಿಖೆಯೊಂದಿಗೆ ಅನಾಮಿಕ ಜಾಲವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಸುಳಿವು ನೀಡಿದ್ದಾರೆ.ತಾ. 11 ರಂದು ಅನಾಮಿಕ ಮಂದಿ ಕಂದಾಯ ಇಲಾಖೆಯ ವಿಶೇಷ ಅಧಿಕಾರಿ ಜಗದೀಶ್ ಎಂಬವರಿಗೆ ಕರೆ ಮಾಡಿ, ಅವರು ಹೊಂದಿರುವ ಬ್ಯಾಂಕ್ ಖಾತೆಯ ಎಟಿಎಂನ 14 ಡಿಜಿಟಲ್ ಸಂಖ್ಯೆಗಳು, ಪಿನ್ ನಂಬರ್ ಹಾಗೂ ಓಟಿಪಿ ನಂಬರ್‍ಗಳನ್ನು ಪಡೆದುಕೊಂಡಿರುವದು ಬೆಳಕಿಗೆ ಬಂದಿದೆ. ಆ ಬೆನ್ನಲ್ಲೇ ಅಧಿಕಾರಿಯ ಬ್ಯಾಂಕ್ ಉಳಿತಾಯ ಖಾತೆಯಿಂದ ರೂ. 1.20 ಲಕ್ಷ ಡ್ರಾ ಮಾಡಿ ಹಣ ವಂಚಿಸಲಾಗಿದೆ.

ಆ ದಿನವೇ ಬೆಳಿಗ್ಗೆ ನಗರದ ವಕೀಲ ಶಿವಪ್ರಸಾದ್ ಎಂಬವರಿಗೂ ಕರೆ ಮಾಡಿರುವ ವಂಚಕರು, ಮೇಲಿನ ಎಲ್ಲ ರಹಸ್ಯ ಮಾಹಿತಿ ಕಲೆ ಹಾಕಿದ ಬೆನ್ನಲ್ಲೇ ರೂ. 26,200 ಮೊತ್ತವನ್ನು ಲಪಟಾಯಿಸಿರುವದು ಗೋಚರಿಸಿದೆ. ಈ ಸಂಬಂಧ ಅಧಿಕಾರಿ ಹಾಗೂ ವಕೀಲ ನೀಡಿರುವ ಪುಕಾರಿನ ಮೇರೆಗೆ ನಗರ ಪೊಲೀಸ್ ಠಾಣಾಧಿಕಾರಿ ಷಣ್ಮುಗ ಅವರು ಮಾಹಿತಿ ತಂತ್ರಜ್ಞಾನ ಕಾಯ್ದೆ 2008ರ ಅಡಿಯಲ್ಲಿ ಮತ್ತು ಪೊಲೀಸ್ ಕಾಯ್ದೆ 417,418 ಹಾಗೂ 420ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಪೊಲೀಸರು ತನಿಖೆ ಕೈಗೊಂಡು ಸೈಬರ್ ಕ್ರೈಂ ಪೊಲೀಸ್ ವಿಚಾರಣೆಗಾಗಿ ಮೊಕದ್ದಮೆ ವರ್ಗಾಯಿಸಿದ್ದಾರೆ.

ಮೇಲಿನ ಪ್ರಕರಣದ ಬಗ್ಗೆ ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಪಿ. ಸುಮನ್ ಅವರು, ಈ ಬಗ್ಗೆ ಸಾರ್ವಜನಿಕರು ಎಚ್ಚರವಿರುವಂತೆ ಮತ್ತೊಮ್ಮೆ ಸಲಹೆ ನೀಡುವದಾಗಿ ನುಡಿದರು. ಅಲ್ಲದೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರಿಗೆ ವಿಶೇಷ ತನಿಖೆಗೆ ನಿರ್ದೇಶಿಸಿದ್ದು, ಸೈಬರ್ ಕ್ರೈಂ ಮೂಲಕ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವದಾಗಿ ಸುಳಿವು ನೀಡಿದರು.