ಗೋಣಿಕೊಪ್ಪ ವರದಿ, ಡಿ, 13 : ಮಾಯಮುಡಿ, ನೊಕ್ಯ, ತಿತಿಮತಿ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಸುಮಾರು 22 ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವಲ್ಲಿ ತಿತಿಮತಿ ಹಾಗೂ ಮತ್ತಿಗೋಡು ವನ್ಯಜೀವಿ ಇಲಾಖೆ ಕಾರ್ಯಾಚರಣೆ ತಂಡ ಯಶಸ್ವಿಯಾಗಿವೆ. ಮರಿಯೊಂದಿಗೆ ಆನೆ ಕಂದಕ ದಾಟಲು ಹಿಂದೇಟು ಹಾಕಿದ ಆನೆಗಳಿಂದ ಕಾರ್ಯಾಚರಣೆ ತಂಡ ದಿನಪೂರ್ತಿ ತೊಂದರೆ ಅನುಭವಿಸಿತು. ಇತ್ತ ಆನೆಗಳು ಮತ್ತೆ ತೋಟಕ್ಕೆ ಓಡುತ್ತಿರುವದರಿಂದ ಕಾರ್ಮಿಕರನ್ನು ರಕ್ಷಿಸುವ ಬಗ್ಗೆ ಆತಂಕ ಎದುರಾಯಿತು. ತಿತಿಮತಿ ಪಟ್ಟಣಕ್ಕೆ ಅನೆಗಳು ಸೇರಿಕೊಂಡು ಭಯ ಮೂಡಿಸಿತ್ತು.

2 ದಿನಗಳಿಂದ ಆನೆಗಳನ್ನು ಹಂತ, ಹಂತವಾಗಿ ಕಾಡಿಗೆ ಅಟ್ಟಲಾಯಿತು. 12 ಆನೆಗಳ ಹಿಂಡು ಕಾರ್ಯಾಚರಣೆ ವೇಳೆ ಸುಲಭವಾಗಿ ಕಾಡು ಸೇರಿದವು. ಉಳಿದಿದ್ದ 10 ಆನೆಗಳು ಮರಿಯಿದ್ದ ಕಾರಣಕ್ಕೆ ತೋಟ ಬಿಟ್ಟು ಕದಲದೆ ಕಾರ್ಯಾಚರಣೆ ತಂಡಕ್ಕೆ ಕಾಟ ಕೊಟ್ಟವು. ತಿತಿಮತಿ ಪಟ್ಟಣಕ್ಕೆ ಅಗಮಿಸಿದ್ದ ಆನೆಗಳನ್ನು ಕಾಡು ಸೇರಿಸಲು ಸುಮಾರು 10 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಲಾಯಿತು. ಮರಿಗಳನ್ನು ರಕ್ಷಿಸಿಕೊಳ್ಳಲು ಆನೆಗಳು ಆನೆ ಕಂದಕವಿದ್ದ ಕಡೆಗೆ ಸಾಗದೆ ಮತ್ತೆ ತೋಟ, ಪಟ್ಟಣಕ್ಕೆ ಓಡಿಬರುತ್ತಿದ್ದವು. ವಿದ್ಯಾರ್ಥಿಗಳನ್ನು ಆನೆಗಳಿಂದ ರಕ್ಷಿಸಲು ತಂಡ ಹರಸಾಹಸ ಪಡಬೇಕಾಯಿತು.

ಮರಿಗಳಿದ್ದ ಕಾರಣ ಮರಿಗಳ ಜೀವಕ್ಕೆ ಅಪಾಯ ಎಂಬ ಕಾರಣಕ್ಕೆ ಆನೆಗಳು ಆನೆಕಂದಕ ದಾಟಿ ಅರಣ್ಯ ಸೇರಲು ಹಿಂದೇಟು ಹಾಕುತ್ತಿದ್ದವು. ಸುಮಾರು 5 ಗಂಟೆ ನಿರಂತರವಾಗಿ ಕಾರ್ಯಾಚರಣೆ ನಡೆಸಿದರೂ, ತೆರಳದ ಆನೆಗಳು ಜನರ ಮೇಲೆರಗಲು ಬರುತ್ತಿದ್ದವು. ನಂತರ ಜೆಸಿಬಿ ಮೂಲಕ ಕಂದಕವನ್ನು ಮುಚ್ಚಿ ಅತ್ತ ಅಟ್ಟಲಾಯಿತು. ಹೊಸ ಮಣ್ಣು ಎಂಬ ಕಾರಣಕ್ಕೆ ಮತ್ತೆ ಅತ್ತ ಮರಿಗಳೊಂದಿಗೆ ಸಾಗದ ಆನೆಗಳು ಸಂಜೆ 6 ಗಂಟೆ ಸುಮಾರಿಗೆ ಮರಿಗಳೊಂದಿಗೆ ತಿತಿಮತಿ ಅರಣ್ಯ ವಸತಿಗೃಹದ ಭಾಗಗಳಿಂದ ಅರಣ್ಯ ಸೇರಿದವು. ಸ್ಥಳೀಯ ವಿದ್ಯಾರ್ಥಿಗಳನ್ನು ಇಲಾಖೆ ವಾಹನದಲ್ಲಿ ಮನೆಗೆ ಕರೆದೊಯ್ಯಲಾಯಿತು.

ಕಾರ್ಯಾಚರಣೆ ವೇಳೆ ಒಂದಷ್ಟು ಬೆಳೆಗಾರರು ತಮ್ಮ ತೋಟದ ಮೂಲಕ ಅನೆಗಳನ್ನು ಅಟ್ಟಲು ಅವಕಾಶ ನೀಡದೆ, ವಿರೋಧ ವ್ಯಕ್ತಪಡಿಸಿದ ಘಟನೆ ನೊಕ್ಯ ಗ್ರಾಮದಲ್ಲಿ ನಡೆಯಿತು. ಸ್ಥಳಕ್ಕೆ ಡಿಸಿಎಫ್ ಕ್ರೈಸ್ತರಾಜ್, ಎಸಿಎಫ್ ಶ್ರೀಪತಿ ಆಗಮಿಸಿದರು. ನಂತರ ಅನ್ಯ ಮಾರ್ಗವಿಲ್ಲದೆ ಅದೇ ತೋಟಗಳ ಮೂಲಕ ಕಾಡು ಸೇರಿಸುವಲ್ಲಿ ಯಶಸ್ವಿಯಾದರು.

ಮಾಯಮುಡಿ ಗದ್ದೆಯಲ್ಲಿ ದಾಂಧಲೆ ನಡೆಸಿದ್ದ ಆನೆಗಳು ಮತ್ತೆ ರಾತ್ರಿ ಬಂದು ಒಂದಷ್ಟು ಬೆಳೆ ತಿಂದು ಮತ್ತೆ ಕಾಡಿಗೆ ಸೇರಿಕೊಳ್ಳುವ ಮೂಲಕ ಆತಂಕ ದೂರವಾದಂತಾಗಿದೆ.

ಪ್ರತಿಭಟನೆ ಎಚ್ಚರಿಕೆ : ತಿತಿಮತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಡಾನೆ ಹಾವಳಿಗೆ ಶಾಶ್ವತ ಕ್ರಮಕೈಗೊಳ್ಳಲು ಮನವಿ ಮಾಡಿಕೊಂಡಿರುವ ತಿತಿಮತಿ, ನೊಕ್ಯ ಗ್ರಾಮಸ್ಥರು, 10 ದಿನಗಳಲ್ಲಿ ಪರಿಹಾರಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.

ತಿತಿಮತಿ ಗ್ರಾಮ ಪಂಚಾಯಿತಿ, ಗ್ರಾಮದ ಮುಖಂಡರುಗಳು ತಿತಿಮತಿ ಎಸಿಎಫ್ ಶ್ರೀಪತಿ ಅವರಿಗೆ ಮನವಿ ಸಲ್ಲಿಸಿದ್ದು, ಕ್ರಮಕ್ಕೆ ಮುಂದಾಗದಿದ್ದಲ್ಲಿ ತಾ. 26 ರಂದು ತಿತಿಮತಿ, ದೇವರಪುರ, ನೊಕ್ಯ, ಕಲ್‍ತೋಡು, ಮಾಯಮುಡಿ, ಬಾಲಾಜಿ ಸುತ್ತಲ ಗ್ರಾಮಸ್ಥರನ್ನು ಸೇರಿಸಿ ಎಎಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು. ಈ ಸಂದರ್ಭ ಎಸಿಎಫ್ ಪರಿಹಾರ ಕ್ರಮಗಳ ಕುರಿತು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.

ನೊಕ್ಯ ಗ್ರಾಮಕ್ಕೆ ನುಸುಳುವ ಆನೆಗಳ ತಡೆಗೆ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಕಂಬಿಗಳನ್ನು ತುರ್ತಾಗಿ ಆನೆಗಳು ನುಸುಳುವ ಜಾಗದಲ್ಲಿ ಅಳವಡಿಸಬೇಕು, ಕಾಡು ಸೇರಿರುವ ಚೆಪ್ಪುಡೀರ ಕುಟುಂಬದ ಸ್ಕಾಲರ್‍ಶಿಪ್ ಜಾಗದ ಕಾಡು ತೆರವು ಮಾಡುವದು, ರೈತರ ಬೆಳೆಯನ್ನು ರಕ್ಷಿಸಲು ಶೀಘ್ರವಾಗಿ ಯೋಜನೆ ರೂಪಿಸಬೇಕು, ಈಗಾಗಲೇ ಕಾಫಿ, ಕಾಳುಮೆಣಸು ಬೆಳೆ ಕೊಯ್ಲು ಸಮಯವಾಗಿರುವದರಿಂದ ಬೆಳೆಗಾರರು, ಕಾರ್ಮಿಕರ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ತಿತಿಮತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್, ಜಿ.ಪಂ. ಸದಸ್ಯೆ ಪಿ. ಆರ್. ಪಂಕಜ, ತಾ.ಪಂ. ಸದಸ್ಯೆ ಆಶಾಜೇಮ್ಸ್, ಗ್ರಾಮದ ಹಿರಿಯ ಬೆಳೆಗಾರರುಗಳಾದ ಚೆಪ್ಪುಡೀರ ಎ. ಕಾರ್ಯಪ್ಪ, ಚೆಕ್ಕೇರ ಎಂ. ಬೆಳ್ಯಪ್ಪ, ಚೆಪ್ಪುಡೀರ ರಾಮಕೃಷ್ಣ, ಮಹೇಶ್, ಗ್ರಾ.ಪಂ. ಸದಸ್ಯ ಅನೂಪ್ ಪಾಲ್ಗೊಂಡಿದ್ದರು. - ಸುದ್ದಿಪುತ್ರ