ಸುಂಟಿಕೊಪ್ಪ, ಡಿ. 13: ಟ್ರ್ಯಾಕ್ಟರ್ ಚಾಲಿಸಿಕೊಂಡು ಕಾಫಿ ತೋಟಕ್ಕೆ ತೆರಳುತ್ತಿದ್ದ ತೋಟ ಮಾಲೀಕನ ಮೇಲೆ ಕಾಡುಕೋಣ ದಿಢೀರನೆ ಧಾಳಿ ನಡೆಸಿದ್ದು, ಪ್ರಾಣಭಯದಿಂದ ಮಾಲೀಕ ಓಡಿ ಜೀವ ಉಳಿಸಿಕೊಂಡರೆ, ಕ್ರೋಧಗೊಂಡ ಕಾಡುಕೋಣ ಟ್ರ್ಯಾಕ್ಟರ್‍ನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.
ಕಂಬಿಬಾಣೆ ಮ್ಯಾಗಡೂರ್ ತೋಟದ ಮಾಲೀಕ ಟಿ.ಕೆ. ಸಾಯಿಕುಮಾರ್ ಕಾಡುಕೋಣ ಧಾಳಿಯಿಂದ ಬಚಾವಾದ ವ್ಯಕ್ತಿಯಾಗಿದ್ದಾರೆ.
ಕಳೆದ 1 ತಿಂಗಳಿನಿಂದ ಮ್ಯಾಗಡೂರ್ ಗ್ರೂಪ್ ತೋಟದಲ್ಲಿ 4 ಕಾಡುಕೋಣಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಕಾರ್ಮಿಕರು ಜೀವಭಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ.
ತಾ. 12 ರಂದು ಟಿ.ಕೆ. ಸಾಯಿಕುಮಾರ್ ಎಸ್ಟೇಟಿನಲ್ಲಿ ಕಾರ್ಮಿಕರು ಕಾಫಿ ಕೊಯ್ಲಿನಲ್ಲಿ ನಿರತರಾಗಿದ್ದಾಗ ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದ್ದು ಕಾರ್ಮಿಕರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.
ತಾ. 13 ರಂದು ಕಾರ್ಮಿಕರನ್ನು ಬೇರೆಡೆ ತೋಟಕ್ಕೆ ಕೆಲಸಕ್ಕೆ ಕಳುಹಿಸಿದ್ದ ಮಾಲೀಕರಾದ ಸಾಯಿಕುಮಾರ್ ತನ್ನ ಟ್ರ್ಯಾಕ್ಟರ್‍ನಲ್ಲಿ ಮಧ್ಯಾಹ್ನ ತೋಟವನ್ನು ವೀಕ್ಷಿಸಲು ತೆರಳಿದಾಗ ಕಾಡುಕೋಣ ದಿಢೀರನೆ ಧಾಳಿ ನಡೆಸಲು ಮುಂದಾದಾಗ ಅವರು ಟ್ರ್ಯಾಕ್ಟರ್ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ. ಕೋಪಗೊಂಡ ಕಾಡುಕೋಣ ಟ್ರ್ಯಾಕ್ಟರ್‍ನ್ನು ತಿವಿದು ಧ್ವಂಸಗೊಳಿಸಿದೆ. ಇದರಿಂದ ಅಂದಾಜು 1 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎನ್ನಲಾಗಿದೆ. ಅರಣ್ಯ ಅಧಿಕಾರಿಗಳಿಗೆ ಈ ಬಗ್ಗೆ ಸಾಯಿಕುಮಾರ್ ದೂರು ನೀಡಿದ್ದಾರೆ.