ಮಡಿಕೇರಿ, ಡಿ. 13: ಕೊಡಗಿನ ಮಳೆದೈವವೆಂದೇ ಭಕ್ತರ ಪ್ರೀತಿಗೆ ಪಾತ್ರವಾಗಿರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನವು ಒಂದು ಶ್ರದ್ಧಾಭಕ್ತಿಯ ಧಾರ್ಮಿಕ ಕ್ಷೇತ್ರವಾಗಿದ್ದು, ಈ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಗುರುತಿಸಬಾರದೆಂದು ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕಾಡಂಡ ಜೋಯಪ್ಪ, ಪ್ರವಾಸಿತಾಣಗಳ ವೀಕ್ಷಣೆಗೆ ನಿಯೋಜಿಸಿರುವ ಮಿನಿಬಸ್‍ನ ಪ್ರವಾಸಿತಾಣಗಳ ಪಟ್ಟಿಯಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಹೆಸರು ಕೂಡ ಇದ್ದು, ಇದನ್ನು ಕೈ ಬಿಟ್ಟು ಧಾರ್ಮಿಕ ಕ್ಷೇತ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿ ದರು. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಪ್ರವಾಸೋದ್ಯ್ಯಮ ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೂ ತರಲಾಗುವದೆಂದರು. ಧಾರ್ಮಿಕ ಕ್ಷೇತ್ರವನ್ನು ಪ್ರವಾಸಿತಾಣವೆಂದು ಪ್ರಚಾರ ಮಾಡಿದರೆ ದೇವಾಲಯದ ಆಚಾರ, ವಿಚಾರಕ್ಕೆ ಧಕ್ಕೆಯಾಗಲಿದೆ. ಇದೇ ಪರಿಸ್ಥಿತಿ ಪಾಡಿ ಶ್ರೀಇಗ್ಗುತಪ್ಪ ದೇವಾಲಯಕ್ಕೂ ಬರಬಹುದೆಂಬ ಆತಂಕವಿದ್ದು, ಈ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವೆಂದೇ ಪರಿಗಣಿ¸ Àಬೇಕು ಎಂದರು.

ತಲಕಾವೇರಿ-ಭಾಗಮಂಡಲ ಕ್ಷೇತ್ರಗಳನ್ನು ಪ್ರವಾಸಿತಾಣವೆಂದು ಘೋಷಿಸಿ ಪ್ರವಾಸಿಗರ ಸ್ವಚ್ಛಂದ ವಿಹಾರಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ನಡೆಯಬಾರದ ಅನಾಹುತಗಳು ನಡೆದಿರುವದು ಇತ್ತೀಚೆಗೆ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರಿಸಿದೆ. ಈ ಕಾರಣಕ್ಕಾಗಿ ಇದೀಗ ದೇವಾಲಯದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುವಂತಾಗಿದೆ ಎಂದರು.

ಕಟ್ಟುಪಾಡುಗಳಿಗೆ ವಿರುದ್ಧವಾಗಿ ದೇವಾಲಯ ಪ್ರವೇಶಿಸಲು ಪ್ರವಾಸಿ ಗರು ಮುಂದಾದಲ್ಲಿ ಅಂತಹವರನ್ನು ತಡೆದು ಹಿಂದಕ್ಕೆ ಕಳುಹಿಸಲಾಗುವದು. ಇದರಿಂದ ಉಂಟಾಗಬಹುದಾದ ಸಮಸ್ಯೆಗಳಿಗೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹೊಣೆಯಾಗಬೇಕಾಗುತ್ತದೆ ಎಂದು ಜೋಯಪ್ಪ ಹೇಳಿದರು.

ಸಂಘದ ನಿರ್ದೇಶಕ ಪಾಡಂಡ ನರೇಶ್ ಮಾತನಾಡಿ, ಶ್ರೀಪಾಡಿ ಇಗ್ಗುತ್ತಪ್ಪ ದೇವಾಲಯವಿರುವ ಸುತ್ತಮುತ್ತಲ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅವಕಾಶ ನೀಡದೆ ಜಲಮೂಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದರು. ಈ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳು ನಿರ್ಮಾಣಗೊಂಡರೆ ದೇವರ ಅಭಿಷೇಕಕ್ಕೂ ನೀರು ಸಿಗದ ಪರಿಸ್ಥಿತಿ ಎದುರಾಗಬಹುದು. ದೇವಾಲಯವಿರುವ ಸುತ್ತಮುತ್ತಲ 747 ಎಕರೆ ಪ್ರದೇಶ ಪ್ರಸ್ತುತ ಕಂದಾಯ ಇಲಾಖೆಯ ಅಧೀನದಲ್ಲಿದ್ದು, ಈ ಜಾಗವನ್ನು ತಕ್ಷಣ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದು ದೇವಾಲಯ ಮತ್ತು ಪರಿಸರ ಸಂರಕ್ಷಣೆಗೆ ಸಹಕರಿಸಬೇಕೆಂದು ಮನವಿ ಮಾಡಿದರು. ದೇವಾಲಯವಿರುವ ಪ್ರದೇಶದಲ್ಲಿ ಜಾಗ ಅಕ್ರಮವಾಗಿ ಒತ್ತುವರಿ ಯಾಗುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನರೇಶ್ ಒತ್ತಾಯಿಸಿದರು.

ವ್ಯಕ್ತಿಯೊಬ್ಬರು ತಮ್ಮ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಂಡಿದ್ದು, ಭಕ್ತಜನ ಸಂಘದÀ ಸಭೆ ಹಾಗೂ ಗ್ರಾಮ ಸಭೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಯಾವದೇ ಕಾರಣಕ್ಕೂ ವಾಣಿಜ್ಯೋದ್ಯಮಕ್ಕೆ ಪರವಾನಗಿ ನೀಡಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಕಾರ್ಯದರ್ಶಿ ಪರದಂಡ ಲಲಿತಾ ನಂದಕುಮಾರ್, ನಿರ್ದೇಶಕ ಕಲಿಯಂಡ ಹ್ಯಾರಿ ಮಂದಣ್ಣ ಹಾಗೂ ಸದಸ್ಯ ಬೊಳದಂಡ ನಂದಕುಮಾರ್ ಉಪಸ್ಥಿತರಿದ್ದರು.