ಮಡಿಕೇರಿ, ಡಿ. 13: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊಡವ ಜನಾಂಗದ ಪ್ರಾತಿನಿಧಿಕ ಸಂಸ್ಥೆಯಾಗಿ ಪ್ರತಿಷ್ಠಿತವಾಗಿ ಗುರುತಿಸಿಕೊಂಡಿರುವ ಹಲವರು ಹೇಳುವಂತೆ ಬೆಂಗಳೂರಿನ ಕೊಡವ ಐನ್‍ಮನೆ ಎಂದೇ ಪರಿಗಣಿತವಾಗಿರುವ ಬೆಂಗಳೂರು ಕೊಡವ ಸಮಾಜದಲ್ಲಿ ಇದೀಗ ಚುನಾವಣೆಯ ಕಾವು ಎದುರಾಗಿದೆ. ಸಮಾಜದ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳ ಪ್ರಮುಖ ಸ್ಥಾನಕ್ಕೆ ಎರಡು ಗುಂಪುಗಳು ಸ್ಪರ್ಧೆ ಮಾಡಿದ್ದು, ರಾಜಧಾನಿಯಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ತಾ. 16 ರಂದು ಸಮಾಜ ನೂತನ ಆಡಳಿತ ಮಂಡಳಿಯ ಚುನಾವಣೆ ನಿಗದಿಯಾಗಿದ್ದು, ಪ್ರತಿಷ್ಠಿತವಾಗಿರುವ ಈ ಸಮಾಜದ ಚುನಾವಣೆಗೆ ಸಂಬಂಧಿಸಿದಂತೆ ಕೊಡಗಿನ ಕೊಡವ ಜನಾಂಗದವರಲ್ಲೂ ಕುತೂಹಲ ನಿರ್ಮಾಣವಾಗಿದೆ.
ಸುಮಾರು 12 ಸಾವಿರದಷ್ಟು ಮಂದಿ ಸದಸ್ಯರು ಈ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಾಗಿದ್ದು, ಎರಡು ಗುಂಪುಗಳಲ್ಲಿ ಆಕಾಂಕ್ಷಿಗಳು ಸ್ಪರ್ಧಾ ಕಣದಲ್ಲಿರುವದು ಕೌತುಕ ಸೃಷ್ಟಿಸಿದೆ.
ಹಾಲಿ ಅಧ್ಯಕ್ಷರಾಗಿರುವ ಮಂಡೇಡ ರವಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ತಾ. 16ರ ಭಾನುವಾರದಂದು ಬೆಂಗಳೂರು ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಸಮಾಜದ 51ನೆಯ ವಾರ್ಷಿಕ ಮಹಾಸಭೆ ಹಾಗೂ ಇದೇ ಸಂದರ್ಭ 2018-21ನೇ ಸಾಲಿನ ನೂತನ ಆಡಳಿತ ಮಂಡಳಿಗೆ ಚುನಾವಣೆಯೂ ನಿಗದಿಯಾಗಿದೆ.
ಚುನಾವಣೆ ರಹಿತವಾಗಿ ಆಡಳಿತ ಮಂಡಳಿಯ ರಚನೆಗೆ ಆರಂಭದಲ್ಲಿ ಪ್ರಯತ್ನ ನಡೆದಿತ್ತಾದರೂ ಎರಡು ಗುಂಪುಗಳ ಸ್ಪರ್ಧಾಕಾಂಕ್ಷಿಗಳ ನಡುವೆ ಒಮ್ಮತ ವೇರ್ಪಡದ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಚುನಾವಣೆಗೆ ಸಂಬಂಧಿಸಿದಂತೆ 12 ಸಾವಿರದಷ್ಟು ಸದಸ್ಯ ಮತದಾರರಾಗಿದ್ದು, ಬಿರುಸಿನ ಚಟುವಟಿಕೆಗಳು ಈಗಾಗಲೇ ನಡೆಯುತ್ತಿವೆ. ರಾಜ್ಯದ ರಾಜಧಾನಿಯಲ್ಲಿನ ಪ್ರಮುಖ ಸಮಾಜದ ಚುನಾವಣೆ ಇದಾಗಿರುವದರಿಂದ ಈ ಚುನಾವಣೆಗೆ ಸಂಬಂಧಿಸಿದಂತೆ ಕೊಡಗಿನಲ್ಲೂ ಹೆಚ್ಚು ಆಸಕ್ತಿ ಕಂಡು ಬಂದಿದೆ.
ಸ್ಪರ್ಧಾ ಕಣದಲ್ಲಿ
ಪ್ರಸಕ್ತ ನಡೆಯಲಿರುವ ಚುನಾವಣೆಯಲ್ಲಿ ಒಂದು ಗುಂಪಿನಿಂದ ಚೆನ್ನಪಂಡ ಕೆ. ಸುಬ್ಬಯ್ಯ ನೇತೃತ್ವದಲ್ಲಿ ಹಾಗೂ ಮತ್ತೊಂದು ಗುಂಪಿನಿಂದ ಮುಕ್ಕಾಟಿರ ಟಿ. ನಾಣಯ್ಯ ಅವರ ನೇತೃತ್ವದ ಗುಂಪಿನಿಂದ ಸ್ಪರ್ಧೆ ಕಂಡು ಬಂದಿದೆ.
ಕಳೆದ ಅವಧಿಯಲ್ಲಿ ಕಾರ್ಯದರ್ಶಿಯಾಗಿದ್ದ ಚೆನ್ನಪಂಡ ಕೆ. ಸುಬ್ಬಯ್ಯ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು ಈ ತಂಡದಲ್ಲಿ ಉಪಾಧ್ಯಕ್ಷೆ ಸ್ಥಾನಕ್ಕೆ ಮಲ್ಲೇಂಗಡ ಮೀರಾ ಜಲಜಕುಮಾರ್, ಕಾರ್ಯದರ್ಶಿ ಸ್ಥಾನಕ್ಕೆ ಚಿರಿಯಪಂಡ ಸುರೇಶ್ ನಂಜಪ್ಪ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಕೊಕ್ಕಲೆರ ಟಿ. ಕುಟ್ಟಪ್ಪ, ಖಜಾಂಚಿ ಸ್ಥಾನಕ್ಕೆ ಉಳ್ಳಿಯಡ ವಿದ್ವಾನ್ ಅಯ್ಯಪ್ಪ ಹಾಗೂ ಜಂಟಿ ಖಜಾಂಚಿ ಸ್ಥಾನಕ್ಕೆ ಬಾಳೆಕುಟ್ಟಿರ ರಘು ನಂಜಪ್ಪ ಸ್ಪರ್ಧಿಸಿದ್ದಾರೆ.
ಮತ್ತೊಂದು ಗುಂಪಿನಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಮುಕ್ಕಾಟಿರ ಟಿ. ನಾಣಯ್ಯ, ಉಪಾಧ್ಯಕ್ಷೆ ಸ್ಥಾನಕ್ಕೆ ಅಮ್ಮಂಡ ತಾರಾ ದೇವಯ್ಯ, ಕಾರ್ಯದರ್ಶಿ ಸ್ಥಾನಕ್ಕೆ ಕೈಬುಲೀರ ಕೆ. ಪೂಣಚ್ಚ (ಜಾಲಿ), ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಚಂದಪಂಡ ಪ್ರಿನ್ಸ್ ಕರುಂಬಯ್ಯ, ಖಜಾಂಚಿ ಸ್ಥಾನಕ್ಕೆ ಕೋಟ್ರಮಾಡ ಪಿ. ಪೂಣಚ್ಚ (ಲಾಲ) ಹಾಗೂ ಜಂಟಿ ಖಜಾಂಚಿ ಸ್ಥಾನಕ್ಕೆ ಕೋದಂಡ ಶಾನ್ ಕುಟ್ಟಪ್ಪ ಅವರುಗಳು ಸ್ಪರ್ಧಾ ಕಣದಲ್ಲಿದ್ದಾರೆ.
ತಾ. 16 ರಂದು ನಡೆಯಲಿರುವ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾವಣೆ ನಡೆಯಲಿದೆ.