ಮಡಿಕೇರಿ, ಡಿ. 13: ನಿವೃತ್ತ ಲೆಪ್ಟಿನೆಂಟ್ ಜನರಲ್ ಬಿದ್ದಂಡ ಸಿ. ನಂದಾ ಅವರ ಅಂತ್ಯಸಂಸ್ಕಾರವು ಇಂದು ಹೆಬ್ಬೆಟ್ಟಗೇರಿ ಗ್ರಾಮದ ಮೃತರ ನೆಚ್ಚಿನ ತೋಟದ ಬಂಗಲೆಯ ಬಳಿ ಸೇನಾ ಗೌರವದೊಂದಿಗೆ ನೆರವೇರಿತು. ಕೊಡವ ಸಂಪ್ರದಾಯದಂತೆ ತಾವೇ ಆಯ್ಕೆ ಮಾಡಿಕೊಂಡಿದ್ದ ಸುಂದರ ತಾಣದಲ್ಲಿ ಪಾರ್ಥಿವ ಶರೀರವನ್ನು ಭೂದೇವಿಯ ಒಡಲಿನಲ್ಲಿ ಇರಿಸಿ ಅಂತಿಮ ನಮನ ಸಲ್ಲಿಸಲಾಯಿತು.ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ಇಲಾಖೆಯ ಪರವಾಗಿ ಡಾ. ಸುಮನ್ ಡಿ.ಪಿ. ಸಹಿತ ಅನೇಕ ನಿವೃತ್ತ ಸೈನ್ಯಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ರಾಜಕೀಯ ಪ್ರತಿನಿಧಿಗಳು, ಬಂಧು ವರ್ಗ ಹಿರಿಯ ಚೇತನದ ಅಗಲಿಕೆಗೆ ಕಂಬನಿ ಯೊಂದಿಗೆ ಅಂತಿಮ ದರ್ಶನವನ್ನು ಪಡೆದರು. ವೀರ ಸೇನಾನಿಯ ಅಗಲಿಕೆ ವಿಷಯ ತಿಳಿದು ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ
ಪರಿಚಿತರು, ನಿವೃತ್ತ ಸೈನಿಕರು, ಹೆಬ್ಬೆಟ್ಟಗೇರಿ ನಿವಾಸಕ್ಕೆ ಆಗಮಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನಿಂದ ಆಗಮಿಸಿದ್ದ
ಸೇನಾ ತುಕಡಿಯಿಂದ ಮೂರು ಸುತ್ತು ಕುಶಲತೋಪುಗಳನ್ನು ಸಿಡಿಸುವ ಮೂಲಕ ಕೊಡಗಿನ ನೆಚ್ಚಿನ ಸೈನ್ಯಾಧಿಕಾರಿಗೆ ಗೌರವ ಸಲ್ಲಿಸಲಾಯಿತು.