ಬೆಳಗಾವಿ, ಡಿ. 13: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಕೊಚ್ಚಿ ಹೋಗಿರುವ ಪ್ರದೇಶದಲ್ಲಿ ಮತ್ತೆ ಮನೆಗಳನ್ನು ಪುನರ್ನಿರ್ಮಾಣ ಮಾಡಿಕೊಳ್ಳಬೇಕಾದರೆ ಹೊಸ ಲೇಔಟ್‍ಗಳಿಗೆ ಅನುಮತಿ ಪಡೆಯಬೇಕು ಎಂಬ ಅಧಿಕಾರಿಗಳು ವಿಧಿಸಿರುವ ಷರತ್ತು ವಿಧಾನಸಭೆಯಲ್ಲಿ ಆಶ್ಚರ್ಯಕ್ಕೆ ಕಾರಣ ಆಯಿತು. ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಯಲ್ಲಿ ಬಹುತೇಕ ಮನೆಗಳು ಕೊಚ್ಚಿ ಹೋಗಿವೆ. ಆ ಮನೆಗಳನ್ನು ಹೊಸದಾಗಿ ಪುನರ್ನಿರ್ಮಾಣ ಮಾಡಿಕೊಳ್ಳಬೇಕಾದರೆ ಭೂ ಪರಿವರ್ತನೆ ನಿಯಮಗಳನ್ನು ಪಾಲಿಸಬೇಕು ಎಂದು ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಷರತ್ತು ವಿಧಿಸಿದ್ದಾರೆ ಎಂದು ಶಾಸಕ ಕೆ ಜಿ ಬೋಪಯ್ಯ ವಿಧಾನಸಭೆಯಲ್ಲಿ ತಿಳಿಸಿದರು ಪ್ರಶ್ನೋತ್ತರ ಅವಧಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಹೆಚ್. ಹಾಲಪ್ಪ ಪ್ರಶ್ನೆ ಕೇಳಿ ನಗರ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು ನಗರ ಸ್ಥಳೀಯ ಸಂಸ್ಥೆಗಳ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕು ಇಲ್ಲವಾದರೆ ಅಂತಹ ನಿವೇಶನ ಅಥವಾ ಮನೆಗಳ ಖಾತೆಯನ್ನು ದಾಖಲು ಮಾಡುವದಿಲ್ಲ. ಆಸ್ತಿ ಜವಾಬ್ದಾರಿ ವರ್ಗಾವಣೆಗಳನ್ನು ಅಂಗೀಕರಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಇತ್ತೀಚೆಗೆ ಎಲ್ಲ ಕೆಲಸಗಳು ನಿಂತು ಹೋಗಿದೆ. ಈ ಮೊದಲು ತಹಶೀಲ್ದಾರ್ ಭೂ ಪರಿವರ್ತನೆಗೆ ಅನುಮತಿ ನೀಡುತ್ತಿದ್ದರು ಎಂದು ಸಭೆಯ ಗಮನಕ್ಕೆ ತಂದರು. 2013ರ ಅಕ್ಟೋಬರ್ 19 ರ ಮುಂಚೆ ಬಂದಿರುವ ಅನಧಿಕೃತ ಬೆಳವಣಿಗೆ ಯನ್ನು ದಂಡ ವಿಧಿಸಿ ಸಕ್ರಮಗೊಳಿಸಲು ನಿಯಮ ರೂಪಿಸಲಾಗಿದೆ. ಆದರೆ, ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ವಿಧಾನಸಭೆಗೆ ತಿಳಿಸಿದರು.

ಕಲಬೆರಕೆ ನಿಯಂತ್ರಣ

ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ ರಾಜ್ಯದಲ್ಲಿ ಜಾರಿಯಲ್ಲಿದೆಯೇ? ಇದ್ದಲ್ಲಿ ಇದು ಯಾವ ರೀತಿಯ ಕಾರ್ಯ ಚಟುವಟಿಕೆ ನಡೆಸುತ್ತಿದೆ. ಆಹಾರ ಕಲಬೆರಕೆ ಪತ್ತೆಗೆ ಅನುಸರಿಸುವ ಮಾನದಂಡಗಳೇನು; ತಪಾಸಣೆ ಸಂದರ್ಭದಲ್ಲಿ ತನಿಖಾಧಿಕಾರಿಗಳು ಆಮಿಷಕ್ಕೆ ಒಳಗಾಗಿ ಸಮಗ್ರ ವಿಚಾರಣೆ ಮಾಡದೆ ಪ್ರಕರಣ ಕೈಬಿಡುತ್ತಿ ರುವದು ಕಂಡುಬಂದಿದೆಯೇ; ಹಾಗಿದ್ದಲ್ಲಿ ವಿವರಗಳನ್ನು ಒದಗಿಸುವಂತೆ ಶಾಸಕರಾದ ಕೆ.ಜಿ. ಬೋಪಯ್ಯ ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶಿವಾನಂದ ಎಸ್. ಪಾಟೀಲ್ ಅವರು ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆಯು 2005-2006 ರವರೆಗೆ ಜಾರಿಯಲ್ಲಿದ್ದು, ನಂತರ 05-08-2006 ರಲ್ಲಿ ವಿಲೀನಗೊಂಡು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಕಾಯ್ದೆಯಾಗಿದ್ದು, 2011 ರಲ್ಲಿ ನಿಯಮ ಮತ್ತು ನಿಬಂಧನೆಗಳು ರೂಪಿತವಾಗಿ ರಾಜ್ಯದಲ್ಲಿ ಜಾರಿ ಇರುತ್ತದೆ. ಎಲ್ಲಾ ಆಹಾರ ವಹಿವಾಟುದಾರರಿಗೆ ಈ ಕಾಯ್ದೆಯಡಿಯಲ್ಲಿ ನೋಂದಣಿ ಹಾಗೂ ಪರವಾನಗಿ ನೀಡುವದು ಮತ್ತು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ತಿಳುವಳಿಕೆ ನೀಡುವದು. ಆಹಾರ ಕಲಬೆರಕೆ ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಸೆಕ್ಷನ್ 52-64ರ ಅಡಿಯಲ್ಲಿ ಕ್ರಮ ಜರುಗಿಸಬಹುದಾಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ನಿಯಮ ಬದ್ಧ ಆಹಾರ ಮಾದರಿ ಸಂಗ್ರಹಣೆ ಮಾಡಿ ವಿಶ್ಲೇಷಣೆ ಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವದು. ಅಸುರಕ್ಷಿತವೆಂದು ಕಂಡುಬಂದಲ್ಲಿ ಮಾರಾಟಗಾರರ ವಿರುದ್ಧ ಜೆಎಂಎಫ್‍ಸಿ. ನ್ಯಾಯಾಲಯ ದಲ್ಲಿ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳಲಾಗುತ್ತಿದೆ. ಏಪ್ರಿಲ್-2016 ರಿಂದ ಅಕ್ಟೋಬರ್-2018 ರವರೆಗೆ ಎಡಿಸಿ ಮತ್ತು ಜೆಎಂಎಫ್‍ಸಿ. ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿ ಒಟ್ಟು 3,87,500 ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.

ಬೀದಿ ಬದಿಯ ಪಾನಿಪೂರಿ, ಬಜ್ಜಿಬೊಂಡಾ, ಕಬಾಬ್, ಗೋಬಿ ಮಂಜೂರಿ ಅಂಗಡಿಗಳ ತೆರವಿಗೆ ಸರ್ಕಾರ ಯಾವ ಕ್ರಮಕೈಗೊಂಡಿದೆ., ಕರಿದ ಪದಾರ್ಥಗಳ ಎಣ್ಣೆಯನ್ನು ಮರುಬಳಕೆ ಮಾಡುತ್ತಿರುವದು ಇತ್ತೀಚೆಗೆ ಹೆಚ್ಚಾಗುತ್ತಿರುವದು ಕಂಡು ಬಂದಿದೆಯೇ, ಇದಕ್ಕೆ ಕಾರಣಗಳೇನು, ಇದರ ತಡೆಗೆ ಹಾಗೂ ಕರಿದ ಎಣ್ಣೆ ಸಂಗ್ರಹ, ಮರು ಬಳಕೆಗೆ ಅನುಸರಿಸುವ ನಿಯಮಗಳೇನು ಎಂದು ಕೆ.ಜಿ.ಬೋಪಯ್ಯ ಪ್ರಶ್ನಿಸಿದರು.

ಬೀದಿ ಬದಿಯ ಪಾನಿಪೂರಿ ಬಜ್ಜಿ ಬೋಂಡಾ, ಕಬಾಬ್, ಗೋಬಿ ಮಂಜೂರಿ ಅಂಗಡಿಗಳ ತೆರವುಗೊಳಿ ಸುವ ಕಾರ್ಯವು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುತ್ತದೆ. ಈ ವ್ಯಾಪಾರದಲ್ಲಿ ಶುಚಿತ್ವದ ಬಗ್ಗೆ ತಿಳುವಳಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 1900 ಆಹಾರ ವಹಿವಾಟುದಾರರಿಗೆ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗಿದೆ. ಕರಿದ ಎಣ್ಣೆಯನ್ನು ಆಹಾರ ಪದಾರ್ಥಗಳನ್ನು ತಯಾರಿಸಲು ಮರು ಬಳಕೆ ಮಾಡದಂತೆ ಹಾಗೂ ಈ ಎಣ್ಣೆಯನ್ನು ಬಯೋಡೀಸೆಲ್ ಇಂಧನಕ್ಕೆ ಬಳಸುವಂತೆ ತಿಳಿಸಲು ರಾಜ್ಯದ ಎಲ್ಲಾ ಪ್ರಮುಖ ಖಾದ್ಯ ಎಣ್ಣೆ ತಯಾರಕರಿಗೆ 30-10-2018 ಹಾಗೂ 31-10-2018 ರಂದು ತರಬೇತಿ ನೀಡಿ ಇದರ ಬಗ್ಗೆ ಸೂಚನೆ ನೀಡಲಾಗಿದೆ. ಹಾಗೆಯೇ ಖಾದ್ಯ ತೈಲಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಮತ್ತು ಕಾನೂನು, ನಿಬಂಧನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಾಗಿದೆ.

ಕರಿದ ಎಣ್ಣೆಯನ್ನು ಮರು ಬಳಕೆ ಮಾಡುವವರಿಂದ ನಿಯಮಬದ್ಧ ಅಡುಗೆ ಎಣ್ಣೆ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾ ಅಂಕಿತಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶಿವಾನಂದ ಎಸ್.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.