ಕುಶಾಲನಗರ, ಡಿ. 13: ಕುಶಾಲನಗರದ ಖಾಸಗಿ ವೈದ್ಯ ಡಾ.ದಿಲೀಪ್‍ಕುಮಾರ್ ಅವರ ಬರ್ಬರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಹಂತಕರ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದೆ. ಡಾ. ದಿಲೀಪ್‍ಕುಮಾರ್ ಅವರನ್ನು ತಾ. 8 ರಂದು ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ಪ್ರದೀಪ್‍ಕುಮಾರ್ ನೇತೃತ್ವದಲ್ಲಿ ಮೂರು ಕಾರ್ಯಾಚರಣೆ ತಂಡ ವಿವಿಧೆಡೆ ತೆರಳಿದ್ದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿವೆ.
ಕಳೆದ 25 ವರ್ಷಗಳಿಂದ ಕುಶಾಲನಗರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ದಿಲೀಪ್‍ಕುಮಾರ್ ಸಮೀಪದ ಕೊಪ್ಪ ಗ್ರಾಮದಲ್ಲಿ ಸ್ವಂತ ಮನೆಯಲ್ಲಿ ನೆಲೆಸಿದ್ದು ಯಾರೋ ದುಷ್ಕರ್ಮಿಗಳು ಅವರನ್ನು ಹತ್ಯೆಗೈದಿದ್ದರು. ಘಟನೆ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆಹಚ್ಚುವಂತೆ ರಾಜ್ಯ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್, ಸಂಸತ್ ಸದಸ್ಯ ಪ್ರತಾಪ್ ಸಿಂಹ ಅವರುಗಳು ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಡಾ. ದಿಲೀಪ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು ತಂಡಗಳು ಮಾಹಿತಿ ಕಲೆ ಹಾಕಿವೆ. ಇನ್ನೆರಡು ದಿನಗಳಲ್ಲಿ ಆರೋಪಿಗಳ ಬಂಧನ ಸಾಧ್ಯತೆಯಿದೆ ಎಂದು ತನಿಖಾ ತಂಡದ ಪ್ರಮುಖರು ತಿಳಿಸಿದ್ದಾರೆ.