ಮಡಿಕೇರಿ, ಡಿ. 13: ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ನಾಡಿನೆಲ್ಲೆಡೆ ಷಷ್ಠಿ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೋತ್ಸವಗಳೊಂದಿಗೆ, ಅಲ್ಲಲ್ಲಿ ಅನ್ನ ಅಂತರ್ಪಣೆ ಹಾಗೂ ಸಾವಿರಾರು ಮಂದಿ ಭಗವಂತನ ಪೂಜೆಯಲ್ಲಿ ಪಾಲ್ಗೊಂಡು ಪುನೀತರಾದರು. ನಗರದ ಶ್ರೀ ಓಂಕಾರೇಶ್ವರ ಸನ್ನಿಧಿ ಸೇರಿದಂತೆ ಶ್ರೀ ಮುತ್ತಪ್ಪ ಕ್ಷೇತ್ರದ ಸುಬ್ರಹ್ಮಣ್ಯ ದೇವಾಲಯ ಮತ್ತು ಇತರೆಡೆಗಳಲ್ಲಿ ಷಷ್ಠಿ ಮಹೋತ್ಸವ ನಡೆಯಿತು.ಶ್ರೀ ಓಂಕಾರೇಶ್ವರದಲ್ಲಿ ನಿನ್ನೆ ರಾತ್ರಿಯಿಂದಲೇ ವಿಶೇಷ ವಿದ್ಯುತ್ ದೀಪಾಲಂಕಾರದೊಂದಿಗೆ ತಳಿರು- ತೋರಣಗಳಿಂದ ಸಿಂಗಾರಗೊಂಡಿದ್ದ ದೇಗುಲದಲ್ಲಿ ಇಂದು ವಿಶೇಷ ಮಹಾಪೂಜೆ, ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಪುಷ್ಪಾಲಂಕಾರ, ಪಲ್ಲೋತ್ಸವದೊಂದಿಗೆ ಸದ್ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಸಂಜೆಗತ್ತಲೆ ನಡುವೆ ಕಾರ್ತಿಕ ಮಾಸದ ವಿಶೇಷ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ಮಂಟಪೋತ್ಸವ, ಸೇವೆಗಳೊಂದಿಗೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಂಡಿದ್ದರು.

ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಸದಸ್ಯರುಗಳಾದ ಸುನಿಲ್ ಕುಮಾರ್, ಪ್ರಕಾಶ್ ಆಚಾರ್ಯ, ದಮಯಂತಿ, ಉದಯಕುಮಾರ್, ಕವಿತಾ ಕಾವೇರಮ್ಮ, ಆನಂದ್ ಸೇರಿದಂತೆ ಅನೇಕ ಸದ್ಭಕ್ತರು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕಾ.ನಿ.ಅಧಿಕಾರಿ ಜಗದೀಶ್ ಕುಮಾರ್ ಸಹಿತ ಹಾಜರಿದ್ದು, ಸನ್ನಿಧಿ ಅರ್ಚಕರುಗಳಾದ ನಾರಾಯಣಭಟ್, ಪ್ರಸನ್ನಭಟ್ ಹಾಗೂ ಋತ್ವಿಜರು ದೇವತಾ ಕೈಂಕರ್ಯ ನಡೆಸಿಕೊಟ್ಟರು.

ಮುತ್ತಪ್ಪ ಸನ್ನಿಧಿ: ನಗರದ ಶ್ರೀ ಮುತ್ತಪ್ಪ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಷಷ್ಠಿ ಪ್ರಯುಕ್ತ ಉಷಾ ಕಾಲದಿಂದಲೇ ವಿಶೇಷ ಸೇವೆಗಳೊಂದಿಗೆ ಭಗವಂತನಿಗೆ ಕ್ಷೀರಾಭಿಷೇಕ, ಎಳನೀರು ಅಭಿಷೇಕ, ನಾಗಾರಾಧನೆ, ಶ್ರೀ ಮುತ್ತಪ್ಪ ವೆಳ್ಳಾಟಂ ಮುಂತಾದ ಕೈಂಕರ್ಯ ನಡೆಯಿತು. ಸಾವಿರಾರು ಭಕ್ತರು ಪೂಜಾ ಸೇವೆಗಳಲ್ಲಿ ತೊಡಗಿಸಿಕೊಂಡು ಪುನೀತರಾದರು. ಮಧ್ಯಾಹ್ನ ಸರ್ವ ಸೇವೆ ಹಾಗೂ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ಜರುಗಿತು.

ದಿನದ ವಿಶೇಷವಾಗಿ ದೇವರಿಗೆ ಪಂಚಾಮೃತ ಅಭಿಷೇಕ, ಅಪ್ಪಂಸೇವೆ, ಪಂಚಕಜ್ಜಾಯ, ಪುಷ್ಪಾರ್ಚನೆಯೊಂದಿಗೆ, ಭಜನೆ, ಸಿಡಿಮದ್ದು ಪ್ರದರ್ಶನ, ಚಂಡೆ ಸೇವೆ ಇತ್ಯಾದಿ ಜರುಗಿತು. ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಪದಾಧಿಕಾರಿ ಗಳಾದ ಟಿ.ಎಸ್. ಪ್ರಕಾಶ್, ಎಸ್. ಸುರೇಶ, ಉನ್ನಿಕೃಷ್ಣ, ಕೆ.ಎಸ್. ರಮೇಶ್, ಅಶೋಕ್, ಸಂಗೀತಾ ಪ್ರಸನ್ನ, ಶಾರದಾರಾಮನ್ ಸೇರಿದಂತೆ ಇತರ ಪದಾಧಿಕಾರಿಗಳು, ಭಕ್ತವೃಂದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇಲ್ಲಿನ ಕೋಟೆ ಮಾರಿಯಮ್ಮ ಸನ್ನಿಧಿ ಸೇರಿದಂತೆ ವಿವಿಧ ದೇವಾಲಯ ಸನ್ನಿಧಿಗಳಲ್ಲಿನ ನಾಗದೇವರಿಗೆ ಸ್ಕಂದಷಷ್ಠಿ ಪ್ರಯುಕ್ತ ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಇತರ ದ್ರವ್ಯ ಅಭಿಷೇಕ ಸೇವೆಗಳು ಜರುಗಿದವು.

ಕೂಡಿಗೆ ರಥೋತ್ಸವ

ಕೂಡಿಗೆ : ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 50ನೇ ಮಹಾ ರಥೋತ್ಸವವು ಶ್ರದ್ಧಾ ಭಕ್ತಿಯಿಂದ ನಡೆಯಿತು. ಬೆಳಗ್ಗಿಯಿಂದಲೇ ಪ್ರಾರಂಭವಾದ (ಮೊದಲ ಪುಟದಿಂದ) ವಿವಿಶೇಷ ಪೂಜೆ, ಅಭಿಷೇಕ, ಮಹಾ ಮಂಗಳಾರತಿ ಬಳಿಕ ರಥಬಲಿ, ಮಹಾಮಂಗಳಾರತಿ, ರಥೋತ್ಸವಕ್ಕೆ ಮುನ್ನ ನಡೆದ ಸಾಂಪ್ರಾದಾಯಿಕ ಉಯ್ಯಾಲೋತ್ಸವ, ಭಕ್ತರ ಓಂಕಾರ ಝೇಂಕಾರಗಳೊಂದಿಗೆ ಸ್ವಾಮಿಯ ವಿಗ್ರಹವನ್ನು 12 ಗಂಟೆಯ ಅಭಿಜಿನ್ ಮುಹೂರ್ತದಲ್ಲಿ ಭವ್ಯ ಪುಷ್ಪಾಲಂಕೃತ ರಥದ ಒಳಗೆ ಪ್ರತಿಷ್ಠಾಪನೆ ಮಾಡಲಾಯಿತು.

ಗರುಡವು ದರ್ಶನವಾದ ನಂತರ ವೇದ ಮಂತ್ರ ಹಾಗೂ ಅಯ್ಯಪ್ಪ ಸ್ವಾಮಿಯ ಭಕ್ತರ ಘೋಷಣೆಗಳೊಂದಿಗೆ ರಥಕ್ಕೆ ಚಾಲನೆ ನೀಡಲಾಯಿತು.

ದೇವಾಲಯದಲ್ಲಿ ಬೆಳಗ್ಗಿನಿಂದ ಧಾರ್ಮಿಕ ಪೂಜಾ ವಿದಿವಿಧಾನಗಳು ಬಸವಪಟ್ಟಣದ ಸುಬ್ಬುಕೃಷ್ಣ ದೀಕ್ಷಿತ್ ಹಾಗೂ ಕೂಡಿಗೆಯ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ನವೀನ್ ಭಟ್ಟರ ನೇತೃತ್ವದಲ್ಲಿ ಜರುಗಿದವು. ಸಾವಿರಾರು ಭಕ್ತಾಧಿಗಳು ಸಾಲುಗಟ್ಟಿ ನಿಂತು ದರ್ಶನ ಪಡೆದರು.

ರಥೋತ್ಸವದ ಮುಂಭಾಗದಲ್ಲಿ ಅಯ್ಯಪ್ಪ ವ್ರತಾಧಾರಿಗಳು ಕರ್ಪೂರ ಹತ್ತಿಸುವದರ ಮೂಲಕ ಅಯ್ಯಪ್ಪನ ಮಂತ್ರ ಪಠಿಸಿದರು. ಇದೇ ಸಂದರ್ಭ ಭಕ್ತರು ರಥದ ಮುಂದೆ ಈಡುಗಾಯಿ ಒಡೆದು ತಮ್ಮ ಹರಕೆಯನ್ನು ತೀರಿಸಿದರು.

ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ, ಗೊಂಬೆ ಕುಣಿತ, ವೀರಗಾಸೆ, ಕೇರಳದ ಮಹಿಳಾ ತಂಡದ ಚಂಡೇ ವಾದ್ಯ, ಬೆಂಗಳೂರಿನ ಅತ್ಯಾಕರ್ಷಕ ಕೇಸರಿ ತಂಡದ ಗೊಂಬೆ ಕುಣಿತ ಮೆರವಣಿಗೆಗೆ ರಂಗು ನೀಡಿದವು.

ರಥವು ದೇವಾಲಯದ ಆವರಣದಿಂದ ಹೊರಟು ಕೂಡಿಗೆಯ ಮುಖ್ಯರಸ್ತೆಯಲ್ಲಿ ಕೂಡುಮಂಗಳೂರು ಗ್ರಾಮದವರೆಗೆ ಸಾಗುವವರೆಗೂ ಎರಡೂ ಕಡೆಗಳಲ್ಲಿ ಗ್ರಾಮಸ್ಥರು ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅದೇ ಮಾರ್ಗವಾಗಿ ರಥವು ದೇವಾಲಯದ ಆವರಣ ತಲುಪಿತು.

ರಥೋತ್ಸವದ ಅಂಗವಾಗಿ ಕೂಡಿಗೆ ಮತ್ತು ಕುಶಾಲನಗರ ರಾಜ್ಯ ಹೆದ್ದಾರಿಯ ರಸ್ತೆಗಳು ಕೇಸರಿ ಬಣ್ಣದ ಬಂಟಿಂಗ್ಸ್, ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿದ್ದವು.

ಈ ಮಹಾರಥೋತ್ಸವಕ್ಕೆ ಹಾಸನ, ಮೈಸೂರು ಗಡಿ ಭಾಗದ ಗ್ರಾಮಗಳ ಸಹಿತ ಕೊಡಗಿನ ಸಹಸ್ರಾರು ಭಕ್ತಾದಿಗಳು ಆಗಮಿಸಿ ದೇವರ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ದಾರಿಯುದ್ದಕ್ಕೂ ವಿವಿಧ ಸಂಘಟನೆಗಳಿಂದ ಪಾನೀಯ ವಿತರಣೆ ಮಾಡಲಾಯಿತು.

ಇದೇ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ರಿಕಿ ಅಯ್ಯಪ್ಪ, ಕಾರ್ಯದರ್ಶಿ ಡಿ.ಕೆ.ಪೊನ್ನಪ್ಪ, ಜಂಟಿ ಕಾರ್ಯದರ್ಶಿ ಎಂ.ಎಂ.ಮಂದಣ್ಣ, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಟಿ.ಅರುಣ್ ಕುಮಾರ್, ಕೂಡುಮಂಗಳೂರು ಗ್ರಾ.ಪಂ ಸದಸ್ಯರುಗಳು, ಕೂಡಿಗೆಯ ಸತ್ಯನಾರಾಯಣ ಸಮಿತಿಯ ಕಾರ್ಯಕರ್ತರು ಹಾಗೂ ಸ್ಥಳೀಯ ಭಜರಂಗದಳ, ಆರ್.ಎಸ್.ಎಸ್, ಹಿಂದೂ ಜಾಗರಣ ವೇದಿಕೆಯ ಪ್ರಮುಖರು, ವಿವಿಧ ಸಮಿತಿಯ ಸದಸ್ಯರು ಪಾಲ್ಗೊಂಡು ರಥೋತ್ಸವದ ಯಶಸ್ವಿಗೆ ಕಾರಣರಾದರು. ರಥೋತ್ಸವದ ಅಂಗವಾಗಿ ಪ್ರತೀ ವರ್ಷದಂತೆ ಈ ಬಾರಿಯು ಜಾತ್ರೆ ನಡೆಯಿತು.

ಈ ಮಹಾ ರಥೋತ್ಸವ ಕಾರ್ಯಕ್ರಮದಲ್ಲಿ ಕುಶಾಲನಗರದ ಡಿ.ವೈ.ಎಸ್.ಪಿ ಪಿ.ಕೆ.ಮುರುಳೀಧರ್ ಮಾರ್ಗದರ್ಶನದಲ್ಲಿ ಪೋಲೀಸ್ ವೃತ್ರ ನಿರೀಕ್ಷಕ ಕ್ಯಾತೇಗೌಡ ಹಾಗೂ ಕುಶಾಲನಗರ ಠಾಣಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಶುಂಠಿಕೊಪ್ಪ ಹಾಗೂ ಶನಿವಾರಸಂತೆಯ ಠಾಣಾಧಿಕಾರಿ ಸೇರಿದಂತೆ ಪೋಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು.

ಬೈರಂಬಾಡ

ಸಿದ್ದಾಪುರ: ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಅಮ್ಮತಿ ಸಮೀಪದ ಬೈರಂಬಾಡದ ಪುರಾತನ ಪ್ರಸಿದ್ದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳು ನಡೆಯಿತು. ಮುಂಜಾನೆಯಿಂದಲೇ ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯನಿಗೆ ಅಭಿಷೇಕ, ಅಲಂಕಾರ ಹಾಗೂ ಪೂಜಾ ವಿಧಿವಿಧಾನಗಳು ನೆರವೇರಿತು. ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಎಳೆಯರು, ಮಹಿಳೆಯರು ವೃದ್ಧರಾಧಿಯಾಗಿ ವಿವಿಧ ವಯೋಮಾನದ ಅಪಾರ ಭಕ್ತರು ಆಗಮಿಸಿ ಪೂಜೆ ಹಾಗೂ ಹರಕೆ ನೆರವೇರಿಸಿದರು. ಅಪರಾಹ್ನದ ವೇಳೆ ನಡೆದ ವಿಶೇಷ ಪೂಜೆ ಮತ್ತು ಮಹಾ ಮಂಗಳಾರತಿಯ ನಂತರ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಸಂಪನ್ನಗೊಂಡಿತ್ತು. ನಂತರವೂ ಸಂಜೆವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರುಶನ ಪಡೆದರು. ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನ ತಕ್ಕ ಮುಖ್ಯಸ್ಥ ಕುಟುಂಬಸ್ಥರು, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟೀರ ಮುತ್ತಣ್ಣ, ಪೆಮ್ಮಯ್ಯ, ಕರುಂಬಯ್ಯ, ಮುದ್ದಯ್ಯ, ನಂಜಪ್ಪ, ಮೇಕೇರೀರ ಸುಬ್ರಮಣಿ, ಮಂಡೇಪಂಡ ಕಾಳಯ್ಯ ಹಾಗೂ ಇತರರು ಉಪಸ್ಥಿತರಿದ್ದರು. ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಸಿದ್ದಾಪುರ ಪಿಎಸ್‍ಐ ದಯಾನಂದ್ ವ್ಯವಸ್ಥಿತ ಪೊಲೀಸ್ ಬಂದೂಬಸ್ತ್ ಏರ್ಪಡಿಸಿ ಭಕ್ತರನ್ನು, ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಿದರು.

ಸಮೀಪದ ಅಮ್ಮತಿಯಲ್ಲಿರುವ ಶ್ರೀ ಭದ್ರಕಾಳಿ ಮತ್ತು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೂಡ ಷಷ್ಠಿ ಪ್ರಯುಕ್ತ ವಿಶೇಷ ಪೂಜೆಗಳು ನಡೆಯಿತು.

ಕೆದಕಲ್

ಸುಂಟಿಕೊಪ್ಪ : ಕೆದಕಲ್‍ನ ಶ್ರೀ ಭದ್ರಕಾಳೇಶ್ವರಿ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಶೃದ್ಧಾಭಕ್ತಿಯಿಂದ ಆಚರಿಸಲಾಯಿತು.

18ನೇ ವರ್ಷದ ಷಷ್ಠಿ ಉತ್ಸವ ಪ್ರಯುಕ್ತ ದೇವಾಲಯವನ್ನು ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು. ಈ ವರ್ಷ ಭದ್ರಕಾಳೇಶ್ವರಿ ದೇವಾಲಯದ ಆಡಳಿತ ಮಂಡಳಿಯವರು ನಾಗನ ಬನದಲ್ಲಿ ನಾಗಪ್ರತಿಷ್ಠಪನೆ ನೆರವೇರಿಸಿದ್ದು ಪ್ರಥಮ ವರ್ಷದ ಷಷ್ಠಿ ಹಬ್ಬವನ್ನು ಆಚರಿಸಲಾಯಿತು.

ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ವೀರಾಜಪೇಟೆ

ವೀರಾಜಪೇಟೆ : ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ದೇವಾಲಯದಲ್ಲಿ ಷಷ್ಠಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮುತ್ತೈದೆಯರು ಬೆಳಿಗ್ಗೆಯಿಂದಲೇ ಮಾರಿಯಮ್ಮ ಮತ್ತು ನಾಗದೇವರಿಗೆ ಕ್ಷೀರ ಅಭಿಷೇಕÉ, ಅಲಂಕಾರ ಹಾಗೂ ವಿಶೇಷ ಪೂಜೆಗಳ ಸೇವೆ ಸಲ್ಲಿಸಿದರು. ಅಪರಾಹ್ನ 1 ಗಂಟೆಗೆ ದೇವಾಲಯದ ಆವರಣದಲ್ಲಿರುವ ನಾಗದೇವತೆ ಹಾಗೂ ಮಾರಿಯಮ್ಮ ದೇವಿಗೆ ಮಹಾ ಪೂಜೆÉ ನಡೆಯಿತು. ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಬೆಳಿಗ್ಗೆಯಿಂದಲೇ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದಲೂ ಭಕ್ತಾದಿಗಳು ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಸುಬ್ರಹ್ಮಣ್ಯ ಷಷ್ಠಿ ಉತ್ಸವದ ಅಂಗವಾಗಿ ಪಟ್ಟಣದ ಗಣಪತಿ ದೇವಾಲಯ, ಮುನಿಶ್ವರ ದೇವಾಲಯ, ಛತ್ರಕೆರೆ ಬಳಿಯ ಆಂಜನೇಯ ದೇವಾಲಯ ಅಪ್ಪಯ್ಯ ಸ್ವಾಮಿ ರಸ್ತೆಯ ಆಂಜನೇಯಸ್ವಾಮಿ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಷಷ್ಠಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಗೋಣಿಕೊಪ್ಪಲು

ಗೋಣಿಕೊಪ್ಪಲು : ಚಂಪ ಷಷ್ಠಿ ಪ್ರಯುಕ್ತ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಶ್ರೀ ಸುಬ್ರಮಹ್ಮಣ್ಯ ದೇವರಿಗೆ ವಿವಿದ ಅಭಿಷೇಕ, ಪೂಜೆಗಳು ನಡೆದವು.

ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದು ದೇವರಿಗೆ ಹರಕೆ, ಪೂಜೆ ನೆರವೇರಿಸಿದರು. ಬೆಳಿಗ್ಗೆ 5 ಗಂಟೆಗೆ ಬೆಳಕು ದೈವೀ ಪ್ರದಕ್ಷಿಣೆ ನಂತರ 6 ಗಂಟೆಯಿಂದ ವಿಶೇಷ ಅಭಿಷೇಕ ನಡೆದವು.

ಭಕ್ತಾದಿಗಳು ತುಲಾಭಾರ, ತಲೆಮುಡಿ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಎಳೆನೀರು ಅಭಿಷೇಕ, ಹಣ್ಣು ಕಾಯಿ, ಮಂಗಳಾರತಿ ಸೇವೆಯೊಂದಿಗೆ ದೇವರ ಕೃಪೆಗೆ ಪಾತ್ರರಾದರು. ಸಂಜೆ 7 ಗಂಟೆಗೆ ಸಾಮೂಹಿಕ ವಸಂತ ಪೂಜೆ ನಡೆಯಿತು. ನೆರೆದ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಅನ್ನಸಂತರ್ಪಣೆ ಏರ್ಪಡಿಸಿತ್ತು. ಉತ್ಸವದ ಪ್ರಯುಕ್ತ ಉಮಾಮಹೇಶ್ವರಿ ದೇವಿಗೆ ತೊಡಿಸಿದ ಸೀರೆಯನ್ನು ಮಾರಾಟಕ್ಕೆ ಇಡಲಾಗಿತ್ತು. ಭಕ್ತಾದಿಗಳು ಭಕ್ತಿಯಿಂದ ಖರೀದಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ನಿವೃತ್ತ ಮೇಜರ್ ಮನೆಯಪಂಡ ಬೋಪಣ್ಣ, ಕೋಶಾಧಿಕಾರಿ ಜಪ್ಪೆಕೋಡಿ ರಾಜ ಉತ್ತಪ್ಪ, ನಿರ್ದೇಶಕರುಗಳಾದ ಕುಲ್ಲಚಂಡ ಪ್ರಮೋದ್‍ಗಣಪತಿ, ಜಮ್ಮಡ ಸೋಮಣ್ಣ ಪಿ.ವಿ. ಶೋಭಿತ್, ವಿ.ಟಿ. ವಾಸು, ವಿ. ರಾಮಚಾರ್ ಹಾಗೂ ವ್ಯವಸ್ಥಾಪಕ ಹೆಚ್. ಆರ್. ವiಧು ಹಾಜರಿದ್ದರು.

-ಚಿತ್ರ ವರದಿ: ವಾಸು, ಸುಧಿ, ಲಕ್ಷ್ಮೀಶ, ಡಿಎಂಆರ್, ರಾಜು ರೈ, ದಿನೇಶ್, ನಾಗರಾಜಶೆಟ್ಟಿ.