ಕೂಡಿಗೆ, ಡಿ. 13: ಕೂಡಿಗೆ ಗ್ರಾ.ಪಂ. ಹುದುಗೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ವಿದ್ಯುತ್ ಸೌಭಾಗ್ಯ ಯೋಜನೆಯ ಕಾಮಗಾರಿಗೆ ಹುದಗೂರು ವ್ಯಾಪ್ತಿಗೆ ಒಳಪಟ್ಟಿರುವ ಹಾಡಿಗಳಿಗೆ ಚಾಲನೆ ನೀಡಲಾಯಿತು.
ಸೌಭಾಗ್ಯ ವಿದ್ಯುತ್ ಯೋಜನೆಯು ಜಿಲ್ಲೆಯಲ್ಲೇ ಪ್ರಥಮ ವಾಗಿ ಕುಶಾಲನಗರ ಹೋಬಳಿಯ ಹುದಗೂರು, ಗಂಧದಹಾಡಿ, ಕಾಳಿದೇವನ ಹೊಸೂರು, ಸೀಗೇಹೊಸೂರು ವ್ಯಾಪ್ತಿಯ 543 ಕುಟುಂಬಗಳ ಮನೆಗಳಿಗೆ ವಿದ್ಯುತ್ ಒದಗಿಸುವ ಯೋಜನೆಯಾಗಿದ್ದು, ಇದರಲ್ಲಿ ಬಿ.ಪಿ.ಎಲ್. ಕಾರ್ಡ್ ಹೊಂದಿದ ಹಾಗೂ ಈವರೆಗೆ ವಿದ್ಯುತ್ ಸಂಪರ್ಕವನ್ನು ಹೊಂದದವರು ಈ ಯೋಜನೆಯ ಫಲಾನುಭವಿ ಗಳಾಗಿರುತ್ತಾರೆ.
ಸೌಭಾಗ್ಯ ಯೋಜನೆಯ ಗುತ್ತಿಗೆದಾರ ಮೈಸೂರಿನ ಮಂಜುನಾಥ ಅವರು ಗುತ್ತಿಗೆ ಪಡೆದಿದ್ದು, ವಿದ್ಯುತ್ ಅಳವಡಿಕೆಗೆ ಬೇಕಾಗುವ ವಿದ್ಯುತ್ ಕಂಬಗಳ ನೆಡುವಿಕೆಗೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಈ ಯೋಜನೆಯ ಕಾಮಗಾರಿಗಳು ಮುಗಿದಿದ್ದು, ಜಿಲ್ಲೆಯಲ್ಲಿ ನಡೆದ ಪ್ರಕೃತಿ ಕಾರಣ ಮೂರು ತಿಂಗಳ ಹಿಂದೆಯೇ ಮುಗಿಯಬೇಕಾದ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದೆ. ಹಾಡಿಯ ಹಾಗೂ ಇತರ ಗ್ರಾಮಗಳಲ್ಲಿ ಬಿ.ಪಿ.ಎಲ್. ಕಾರ್ಡ್ ಹೊಂದಿದ ಕುಟುಂಬಸ್ಥರು ವಿದ್ಯುತ್ ಸೌಲಭ್ಯ ಇಲ್ಲದಿದ್ದಲ್ಲಿ ಸೌಭಾಗ್ಯ ವಿದ್ಯುತ್ ಯೋಜನೆಯನ್ನು ಪಡೆಯ ಬಹುದಾಗಿದೆ. ಫಲಾನುಭವಿಗಳು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ತಿಳಿಸಿದ್ದಾರೆ.