ಗೋಣಿಕೊಪ್ಪ ವರದಿ, ಡಿ. 13 : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆದ ಎ. ಡಿವಿಜóನ್ ಹಾಕಿ ಲೀಗ್‍ನಲ್ಲಿ ಬೇಗೂರು ಈಶ್ವರ ಯೂತ್ ಕ್ಲಬ್, ಕೋಣನಕಟ್ಟೆ ಇಲೆವೆನ್, ನಾಪೋಕ್ಲು ಶಿವಾಜಿ ತಂಡಗಳು ಗೆಲುವಿನ ನಗೆ ಬೀರಿದವು. ಹಾತೂರು ಯೂತ್ ಕ್ಲಬ್ ಹಾಗೂ ಪೊದ್ದ್‍ಮಾನಿ ಬ್ಲೂಸ್ಟಾರ್ ತಂಡಗಳ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು.
ಬೇಗೂರು ಈಶ್ವರ ಯೂತ್‍ಕ್ಲಬ್ ತಂಡವು ಮಲೆನಾಡ್ ಹುದಿಕೇರಿ ವಿರುದ್ದ 4-1 ಗೋಲುಗಳ ಗೆಲುವು ದಾಖಲಿಸಿತು. ಬೇಗೂರು ಪರವಾಗಿ 4, 10, 38 ನೇ ನಿಮಿಷಗಳಲ್ಲಿ ದೀಪಕ್ 3 ಗೋಲು ಹೊಡೆದರು. 56 ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್‍ನ್ನು ಪ್ರಥ್ವಿ ಗೋಲಾಗಿ ಪರಿವರ್ತಿಸಿದರು. ಮಲೆನಾಡ್ ಪರ 28 ನೇ ನಿಮಿಷದಲ್ಲಿ ಅಯ್ಯಪ್ಪ 1 ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.
ಕೋಣನಕಟ್ಟೆ ಇಲೆವೆನ್ ತಂಡ ಬೇರಳಿನಾಡ್ ತಂಡದ ವಿರುದ್ದ 5-3 ಗೋಲುಗಳ ಭರ್ಜರಿ ಗೆಲುವು ಪಡೆಯಿತು. ಕೋಣನಕಟ್ಟೆ ಪರ 27, 53 ನೇ ನಿಮಿಷಗಳಲ್ಲಿ ಗಣಪತಿ, 29, 56 ನಿಮಿಷಗಳಲ್ಲಿ ಯಶ್ವಿನ್ ತಲಾ ಎರಡು ಗೋಲು ಹೊಡೆದು ಮಿಂಚು ಹರಿಸಿದರು. 50 ನೇ ನಿಮಿಷದಲ್ಲಿ ಅಯ್ಯಪ್ಪ, ಬೇರಳಿನಾಡ್ ಪರ 5 ನೇ ನಿಮಿಷದಲ್ಲಿ ನಿಖಿಲ್, 32 ಹಾಗೂ 58 ನೇ ನಿಮಿಷಗಳಲ್ಲಿ ಬಿದ್ದಪ್ಪ 2 ಗೋಲು ಹೊಡೆದರು.
ನಾಪೋಕ್ಲು ಶಿವಾಜಿ ತಂಡವು ಮೂರ್ನಾಡ್ ಎಂ.ಆರ್.ಎಫ್ ತಂಡವನ್ನು 4-3 ಗೋಲುಗಳಿಂದ ಮಣಿಸಿತು. ಶಿವಾಜಿ ಪರವಾಗಿ 6 ನೇ ನಿಮಿಷದಲ್ಲಿ ವಿಕಾಸ್, 7 ನೇ ನಿಮಿಷದಲ್ಲಿ ಜೋಯಪ್ಪ, 16 ನೇ ನಿಮಿಷದಲ್ಲಿ ಪುನಿತ್, 40 ನೇ ನಿಮಿಷದಲ್ಲಿ ಶುಭಂ, ಮೂರ್ನಾಡ್ ಪರ 34, 59 ನೇ ನಿಮಿಷಗಳಲ್ಲಿ ಬೋಪಣ್ಣ, 29 ನೇ. ನಿಮಿಷದಲ್ಲಿ ಪ್ರಜ್ವಲ್ ಗೋಲು ಹೊಡೆದರು.
ಹಾತೂರು ಯೂತ್ ಕ್ಲಬ್ ಹಾಗೂ ಪೊದ್ದ್‍ಮಾನಿ ಬ್ಲೂಸ್ಟಾರ್ ತಂಡಗಳ ಪಂದ್ಯ 2-2 ಡ್ರಾದಲ್ಲಿ ಅಂತ್ಯವಾಯಿತು. ಹಾತೂರು ಪರ 2 ನೇ ನಿಮಿಷದಲ್ಲಿ ಗಣಪತಿ, 26 ರಲ್ಲಿ ಸೋಮಣ್ಣ, ಪೊದ್ದ್‍ಮಾನಿ ಪರ 19 ರಲ್ಲಿ ಮಾಚಯ್ಯ, 47 ರಲ್ಲಿ ಉತ್ತಯ್ಯ ತಲಾ ಒಂದೊಂದು ಗೋಲು ಹೊಡೆದರು.
- ಸುದ್ದಿಪುತ್ರ