ಮಡಿಕೇರಿ, ಡಿ. 14: ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳುಗೋಡುವಿನ ಮನೆಯೊಂದರಲ್ಲಿ ಡಿಸೆಂಬರ್ 3 ರಿಂದ ಈ ತನಕ ಮೂರು ಬಾರಿ ಕಳ್ಳತನ ನಡೆದಿರುವ ಘಟನೆ ನಡೆದಿದ್ದು, ಪೊಲೀಸರಿಗೆ ಪುಕಾರಾಗಿದೆ.ಅಲ್ಲಿನ ನಿವಾಸಿ ಮಾಚೆಟ್ಟಿರ ನಾಚಪ್ಪ ಎಂಬವರ ಮನೆಯಲ್ಲಿ ಈ ಕಳವು ಪ್ರಕರಣ ವರದಿಯಾಗಿದೆ. ಡಿ. 3 ರಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಹಿಂಭಾಗಿಲನ್ನು ತಳ್ಳಿ ಒಳನುಗ್ಗಿದ ಕಳ್ಳರು ರೂ. 10 ಸಾವಿರದಷ್ಟು ಚಿಲ್ಲರೆ ನಾಣ್ಯಗಳನ್ನು ಅಪಹರಿಸಿದ್ದರು. ಈ ಕುಟುಂಬ ಡಿಸೆಂಬರ್ 6 ರಂದು ಮತ್ತೊಂದು ಸಮಾರಂಭಕ್ಕೆ ತೆರಳಿದ್ದ ಸಂದರ್ಭವೂ ಕಳವಿಗೆ ವಿಫಲ ಯತ್ನ ನಡೆದಿದೆ. ಇದೀಗ ಡಿ. 12 ರಂದು ವಿವಿಧೆಡೆ ಮದುವೆ ಸಮಾರಂಭಗಳಿದ್ದು, ಮದುವೆಗೆ ತೆರಳಿದ್ದ ವೇಳೆಯಲ್ಲಿ ಮತ್ತೆ ಕಳ್ಳರು ಮನೆ ನುಗ್ಗಿದ್ದಾರೆ. ಮನೆ ಹಿಂಭಾಗದ ಬಾತ್ ರೂಂನ ಶೀಟ್ ಒಡೆದು ಒಳ ನುಗ್ಗಿರುವ ಕಳ್ಳರು ಕೊಠಡಿಯಲ್ಲಿದ್ದ ಬೀರುವನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಮನೆಯಿಡೀ ಹುಡುಕಾಟ ನಡೆಸಿದ್ದಾರೆ. ಈ ಹಿಂದೆ ನಡೆದ ಎರಡು ಪ್ರಕರಣದಿಂದ ಚಿನ್ನಾಭರಣಗಳನ್ನು ಮನೆ ಮಂದಿ ಬೀರುವಿ ನಲ್ಲಿರಿಸಿರಲಿಲ್ಲ. ಆದರೂ ಹುಡುಕಾಟ ನಡೆಸಿರುವ ಕಳ್ಳರು ಸುಮಾರು 20 ಗ್ರಾಂ. ಚಿನ್ನಾಭರಣ ಹಾಗೂ ನಗದು ಹಣವನ್ನು ಹಾಡಹಗಲೇ ಅಪಹರಿಸಿ ಪರಾರಿಯಾಗಿದ್ದಾರೆ.

(ಮೊದಲ ಪುಟದಿಂದ) ಈ ಬಗ್ಗೆ 63 ವರ್ಷ ಪ್ರಾಯದವರಾದ ಮಾಚೆಟ್ಟಿರ ನಾಚಪ್ಪ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಹಜರು ನಡೆಸಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಮಾರಂಭಕ್ಕೆಂದು ತೆರಳಿದ್ದನ್ನು ಅರಿತು ಹಾಡಹಗಲೇ ಕಳವು ನಡೆಸಿರುವ ಪ್ರಕರಣ ಅಚ್ಚರಿ ಮೂಡಿಸಿದ್ದು, ಪೊಲೀಸರ ತನಿಖೆಯಿಂದಷ್ಟೆ ಆರೋಪಿಗಳ ಪತ್ತೆಯಾಗಬೇಕಿದೆ.