ಮಡಿಕೇರಿ, ಡಿ. 14: ಮಡಿಕೇರಿ ಸುತ್ತಮುತ್ತಲು ಸಂಭವಿಸಿದ ಮಹಾ ದುರಂತದಿಂದ ಸಂತ್ರಸ್ತರಾದವರ ಬವಣೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಪರಿಹಾರ ಕಾರ್ಯಗಳು ವಿಳಂಬ ವಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ಸಂತ್ರಸ್ತರ ನೆರವಿಗೆ ಮುಂದಾಗ ಬೇಕೆಂದು ಒತ್ತಾಯಿಸಿ ಪ್ರಕೃತಿ ವಿಕೋಪ ಸಂತ್ರಸ್ತರ ಹೋರಾಟ ಸಮಿತಿಯು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು. ಹೋರಾಟ ಸಮಿತಿ ಅಧ್ಯಕ್ಷ ಎಂ ಬಿ. ದೇವಯ್ಯ ನೇತೃತ್ವದಲ್ಲಿ ಸಂತ್ರಸ್ತರು, ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿದರು. (ಮೊದಲ ಪುಟದಿಂದ) ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಮುಷ್ಕರ ನಡೆಸಿದ ಪ್ರತಿಭಟನಾಕಾರರು, ಕೂಡಲೇ ಜಿಲ್ಲಾಡಳಿತ ಕಾರ್ಯ ಪ್ರವೃತ್ತವಾಗದಿದ್ದರೆ ಉಗ್ರ ಹೋರಾಟ ಸಂಘಟಿಸುವದಾಗಿ ಎಚ್ಚರಿಕೆ ನೀಡಿದರು. ಪ್ರಕೃತಿ ವಿಕೋಪ ಘಟಿಸಿ ನಾಲ್ಕು ತಿಂಗಳುಗಳೇ ಕಳೆಯುತ್ತಿದ್ದರೂ, ಬಹುತೇಕ ಸಂತ್ರಸ್ತರ ಹೆಸರನ್ನು ಇಂದಿಗೂ ಜಿಲ್ಲಾಡಳಿತ ಪರಿಗಣಿಸಿಲ್ಲ. ಕೆಲವು ಕುಗ್ರಾಮಗಳಲ್ಲಿ ವ್ಯಾಪಕ ಹಾನಿಯಾಗಿದ್ದರೂ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆಯನ್ನೇ ನಡೆಸಿಲ್ಲ. ಈ ಕಾರಣದಿಂದ ಸಂತ್ರಸ್ತರು ದಾರಿ ಕಾಣದೆ ಕಂಗಾಲಾಗಿದ್ದಾರೆ ಎಂದು, ಪ್ರತಿಭಟನಾಕಾರರು ಅಳಲು ತೋಡಿಕೊಂಡರು. ಎಂ.ಬಿ. ದೇವಯ್ಯ ಮಾತನಾಡಿ, ಸಮಿತಿಯು ಸರ್ಕಾರದ ಗಮನ ಸೆಳೆಯುತ್ತಿದ್ದರೂ, ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಈಚೇಗೆ ಮಡಿಕೇರಿಗೆ ಬಾರದೆ ಗರಗಂದೂರಿನಲ್ಲಿ ಗೌಪ್ಯ ಸಭೆ ನಡೆಸಿ ಮರಳಿರುವದು ದುರ್ದೈವ ಎಂದರು. ಇನ್ನೊಂದೆÀಡೆ ಶಾಸಕಿ ವೀಣಾ ಅಚ್ಚಯ್ಯ ಅವರು ಪ್ರಕೃತಿ ವಿಕೋಪದ ಬಗ್ಗೆ ಗಮನ ಸೆಳೆದಾಗ, ಸಣ್ಣ ನೀರಾವರಿ ಸಚಿವರೇ ತಮಗೆ ಅನಾಹುತದ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ. ಹೋರಾಟ ತೀವ್ರಗೊಳ್ಳುವ ಆತಂಕ ದಿಂದ ಇದೀಗ ಕೆಲವು ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಸಂತ್ರಸ್ತರ ಮನವೊಲಿಸುವ ಕೆಲಸ ಮಾಡುತ್ತಿದ್ದು, ಯಾರೊಬ್ಬರೂ ಈ ತಾತ್ಕಾಲಿಕ ಪರಿಹಾರಕ್ಕೆ ಕಿವಿಗೊಡಬಾರದು ಎಂದು ದೇವಯ್ಯ ಸಲಹೆ ಮಾಡಿದರು. ಜಾಗ ಕಳೆದುಕೊಂಡವರಿಗೆ ಕೂಡಲೇ ಪೈಸಾರಿ ಜಾಗವನ್ನಾದರೂ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ ಅವರು, ಈ ಬಗ್ಗೆ ಸಭೆ ಕರೆಯುವದಾಗಿ ಭರವಸೆ ನೀಡಿದ್ದ ಜಿಲ್ಲಾಧಿಕಾರಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾ ಪಂಚಾಯತ್ ಮಾಜೀ ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ಕÀಣ್ಣೀರಿನಲ್ಲಿರುವ ಸಂತ್ರಸ್ತರ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳುತ್ತಿದ್ದು, ವ್ಯವಸ್ಥೆಯಿಂದ ಬೇಸತ್ತಿರುವ ತಾವು ನಕ್ಸಲ್ ರೀತಿಯ ಹೋರಾಟಕ್ಕೆ ಧುಮುಕಲು ಅವಕಾಶ ನೀಡಬೇಡಿ ಎಂದು ತೀಕ್ಷ್ಣವಾಗಿ ಹೇಳಿದರು. ಸಂಪಾಜೆಯ ಕೆ. ಗಿರಿಜಾ ಎಂಬ ವೃದ್ಧೆ, ತಮ್ಮನ್ನು ಕಾಳಜಿ ಕೇಂದ್ರದಿಂದ ಹೊರಹೋಗಲು ಬಲವಂತ ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಬಾಡಿಗೆ ಮನೆಗಳು ಸಿಗದಿರುವಾಗ ತಾವು ಎಲ್ಲಿಗೆ ಹೋಗುವದು ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರತಿಭಟನಾಕಾರರು, ತಮ್ಮ ಮನವಿಗಳ ಪತ್ರವನ್ನು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಹಸ್ತಾಂತರಿಸಿದರು. ಪ್ರಮುಖರಾದ ಧನಂಜಯ್, ಬಾಲಚಂದ್ರ ಕಳಗಿ ಸೇರಿದಂತೆ ಅಪಾರ ಸಂಖ್ಯೆಯ ಸಂತ್ರಸ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.