ಮಡಿಕೇರಿ, ಡಿ. 14 : ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈತ ಸಂತೆಯನ್ನು ತಾ. 21 ರಿಂದ ಪುನರಾರಂಭಿಸ ಲಾಗುವದೆಂದು ಮಡಿಕೆÉೀರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರು, ಮಡಿಕೆÉೀರಿ ತಾಲೂಕಿನ ರೈತರು ಬೆಳೆÉದ ಕೃಷಿ ಉತ್ಪನ್ನಗಳನ್ನು ಸಮಿತಿಯ ಆವರಣದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ. ರೈತರ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಸ್ಪರ್ಧಾತ್ಮಕ ಬೆಲೆ ಪಡೆಯುವಲ್ಲಿ ರೈತ ಸಂತೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಗ್ರಾಹಕರಿಗೂ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಖರೀದಿಸಲು ಅವಕಾಶ ದೊರೆಯಲಿದೆ ಎಂದು ಹೇಳಿದರು.

ಸಂಘ ಸಂಸ್ಥೆಗಳು, ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತÀರಾದವರು ತಯಾರಿಸಿರುವ ಸಂಬಾರ ಪದಾರ್ಥಗಳು, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಪ್ರಾಂಗಣವನ್ನು ಯಾವದೇ ಸುಂಕವಿಲ್ಲದೆ ಒದಗಿಸಲು ಸಮಿತಿ ತೀರ್ಮಾನಿಸಿದೆ. ಪ್ರಾಂಗಣಕ್ಕೆ ಬರುವ ರೈತರು ಹಾಗೂ ಗ್ರಾಹಕರ ಅನುಕೂಲಕ್ಕೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಾಹನ ನಿಲುಗಡೆಗೂ ವಿಶಾಲವಾದ ಜಾಗ ಲಭ್ಯವಿದ್ದು, ಇದರ ಸದುಪಯೋಗವನ್ನು ರೈತರು ಹಾಗೂ ಗ್ರಾಹಕರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ರೈತರ ಮನವಿ ಮೇರೆಗೆ ಪ್ರಸಕ್ತ ಪ್ರತಿ ಶುಕ್ರವಾರ ಮಾರುಕಟ್ಟೆ ಪ್ರಾಂಗಣದಲ್ಲಿ ರೈತ ಸಂತೆ ಆರಂಭಿಸಲಾಗುತ್ತಿದೆ. ರೈತರು ಮತ್ತು ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದಲ್ಲಿ ವಾರದಲ್ಲಿ ಬುಧವಾರ ಸೇರಿದಂತೆ ವಾರದಲ್ಲಿ ಎರಡು ದಿನ, ಹೆಚ್ಚಿನ ಬೇಡಿಕೆ ಇದ್ದಲ್ಲಿ ವಾರವಿಡೀ ರೈತರ ಸಂತೆ ಆಯೋಜಿಸಲು ಬದ್ಧರಿರುವದಾಗಿ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಅನಂತ ಚೆಂಬು, ಮಾಜಿ ಅಧ್ಯಕ್ಷ ಕಾಂಗೀರ ಸತೀಶ್, ನಿರ್ದೇಶಕರುಗಳಾದ ಬೆಪ್ಪುರನ ಮೇದಪ್ಪ, ಮಂಡೀರ ಹೇಮಲತ ಹಾಗೂ ಪ್ರಬಾರ ಕಾರ್ಯದರ್ಶಿ ರವಿ ಕುಮಾರ್ ಉಪಸ್ಥಿತರಿದ್ದರು.