ವೀರಾಜಪೇಟೆ, ಡಿ. 14: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಚುನಾವಣೆ ಮುಗಿದು 45 ದಿನಗಳು ಕಳೆದರೂ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಕಗ್ಗಂಟಾಗಿ ಉಳಿದಿದ್ದು, ಈಗ ಉಚ್ಚನ್ಯಾಯಾಲಯ ವಿವಾದದ ರಿಟ್ ಅರ್ಜಿಯನ್ನು ವಜಾಗೊಳಿಸಿದ ಅಂತಿಮ ತೀರ್ಪಿನಿಂದ ಚುನಾವಣೆ ನಡೆಸಲು ಸರಕಾರಕ್ಕೆ ಸುಗಮವಾಗಿದೆ.
ಉಚ್ಚ ನ್ಯಾಯಾಲಯದ ಆದೇಶದಂತೆ ಸರಕಾರ ಈ ಹಿಂದೆ ಹೊರಡಿಸಿದ್ದ ಮೀಸಲಾತಿಯ ಪಟ್ಟಿ ಯಥಾ ಸ್ಥಿತಿ ಮುಂದುವರೆಯಲಿ ರುವದರಿಂದ ಚುನಾವಣೆಯನ್ನು ಮರೆತು ನಿರಾಳವಾಗಿದ್ದ ರಾಜಕೀಯ ಪಕ್ಷಗಳು ಈಗ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಕಸರತ್ತು ಆರಂಭಿಸಿವೆ.
ಭಾರತೀಯ ಜನತಾ ಪಾರ್ಟಿ ಈಚೆಗಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಎಂಟು ಸ್ಥಾನಗಳನ್ನು ಪಡೆದು ಅಧ್ಯಕ್ಷ ಪದವಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಹುಮತವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದರೂ ಸಂಸದರು ಹಾಗೂ ಶಾಸಕರ ಬೆಂಬಲ ಪಡೆದರೆ ಬಹುಮತ ಸಾಬೀತು ಪಡಿಸಲು ಸಾಧ್ಯವಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಈಗಾಗಲೇ ಬಿ.ಸಿ.ಎಂ. “ಎ” ಮೀಸಲು ಸ್ಥಾನದ ಅರ್ಹತೆ ಪಡೆದಿರುವ ಬಿಜೆಪಿಯ ಕೆ.ಬಿ. ಹರ್ಷವರ್ಧನ ಅವರನ್ನು ಅಧ್ಯಕ್ಷ ಸ್ಥಾನದ ಪದವಿಗೆ ಆಯ್ಕೆ ಮಾಡಲು ಸಿದ್ಧತೆ ನಡೆದಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯರಿಗೆ ಮೀಸಲಿರುವದರಿಂದ ವಕೀಲೆ ಟಿ.ಕೆ. ಯಶೋಧ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಟ್ಟಣ ಪಂಚಾಯಿತಿ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ 6 ಸ್ಥಾನ ಹಾಗೂ ಜೆಡಿಎಸ್ ಹೊಂದಾಣಿಕೆಯಿಂದ 1ಸ್ಥಾನ ಪಡೆದು ಒಟ್ಟು 7 ಸ್ಥಾನಗಳನ್ನು ಪಡೆದಿವೆ. ಮೂರು ಮಂದಿ ಪಕ್ಷೇತರರು ಕಾಂಗ್ರೆಸ್‍ನ್ನು ಬೆಂಬಲಿಸಿದರೂ ಕಾಂಗ್ರೆಸ್ ಪಕ್ಷದ ಬಹುಮತ ಈ ಚುನಾವಣೆಯಲ್ಲಿ 10 ಸಂಖ್ಯೆಗೆ ಏರಲಿದ್ದು, ಬಿಜೆಪಿ, ಕಾಂಗ್ರೆಸ್ ಸಮಬಲವನ್ನು ಹೊಂದಲಿವೆ. ಪಕ್ಷೇತರರು ಬಿ.ಜೆ.ಪಿ ಪರ ಮತ ಚಲಾಯಿಸಿದರೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಬಿಜೆಪಿ ಪಕ್ಷೇತರರ ಬೆಂಬಲ ಪಡೆಯದಿದ್ದರೆ ಎರಡು ಪಕ್ಷಗಳ ನಡುವಿನ ಸಮ ಸಂಖೈಯ ಸಮಬಲದಲ್ಲಿ ಚುನಾವಣಾಧಿಕಾರಿ ಲಾಟರಿ ಅದೃಷ್ಟದ ಮೂಲಕ
ಎರಡು ಪದವಿಗಳನ್ನು ಆಯ್ಕೆ ಮಾಡಬೇಕಾಗಿದೆ.
(ಮೊದಲ ಪುಟದಿಂದ) ಈಗ ಕಾಂಗ್ರೆಸ್ ಪಕ್ಷದಲ್ಲಿ ಮೀಸಲು ಸ್ಥಾನಕ್ಕೆ ಡಿ.ಪಿ.ರಾಜೇಶ್, ಸಿ.ಕೆ.ಪೃಥ್ವಿನಾಥ್, ಮಹಮ್ಮದ್ ರಾಫಿ ಅರ್ಹತೆ ಪಡೆದಿದ್ದು ಪಕ್ಷದ ಹೈಕಮಾಂಡ್ ಈ ಮೂವರೊಳಗೆ ಯಾರ ಪರ ಒಲವಿದೆ ಎಂದು ಕಾದು ನೋಡಬೇಕಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಜೆ. ಫಸಿಹ ತಬಸುಂ ಮಾತ್ರ ಮಹಿಳಾ ಸ್ಥಾನದ ಮೀಸಲು ಅರ್ಹತೆ ಪಡೆದಿದ್ದು, ಪಕ್ಷದೊಳಗೆ ಯಾರ ಸ್ಪರ್ಧೆ ಇಲ್ಲದೆ ನಿರಾಶದಾಯಕವಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ.
ಧಾರವಾಡದ ಪಾರ್ವತಿ ಹಾಗೂ ಇತರರು ಸೇರಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಪದವಿಗಳ ಆಯ್ಕೆ ಸರಕಾರ ನಿಗದಿಪಡಿಸಿರುವ ಮೀಸಲಾತಿ ಪಟ್ಟಿ ಪುನರಾವರ್ತನೆಯಾಗಿದೆ; ಇದು ಕಾನೂನು ಬಾಹಿರವೆಂದು ಇದನ್ನು ತಡೆ ಹಿಡಿಯುವಂತೆ ಕೋರಿ ಉಚ್ಚ ನ್ಯಾಯಾಲಯಕ್ಕೆ ತಾ. 12-09-2018ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ರಾಜ್ಯ ಸರಕಾರದಿಂದ ಸಮಾಜಾಯಿಷಿಕೆ ಪಡೆದ ಉಚ್ಚ ನ್ಯಾಯಾಲಯ ಸರಕಾರ ಈಗ ಜಾರಿಗೆ ತಂದಿರುವ ಮೀಸಲಾತಿ ಕ್ರಮ ಬದ್ಧವಾಗಿದೆ. ಇದನ್ನು ಮುಂದುವರೆಸುವಂತೆ ಆದೇಶಿಸಿ
ತಾ. 5-12-18ರಂದು ರಿಟ್ ಅರ್ಜಿ ವಜಾಗೊಳಿಸಿದ ಹಿನೆÀ್ನಲೆಯಲ್ಲಿ ಸರಕಾರ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ.
ತಹಶೀಲ್ದಾರ್ ಪ್ರತಿಕ್ರಿಯೆ
ಪಟ್ಟಣ ಪಂಚಾಯಿತಿಯ ಅಧ್ಯಕ್ಷ - ಉಪಾಧ್ಯಕ್ಷ ಪದವಿಗಳ ಚುನಾವಣೆ ನಡೆಸಲು ಸರಕಾರದಿಂದ ಇನ್ನೂ ಅಧಿಕೃತ ಆದೇಶ ಬಂದಿಲ್ಲ. ಆದೇಶ ಪತ್ರ ಬಂದ ತಕ್ಷಣ ಚುನಾವಣಾ ದಿನಾಂಕವನ್ನು ನಿಗದಿಪಡಿಸುವದಾಗಿ ತಾಲೂಕು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾ ಧಿಕಾರಿಯಾಗಿರುವ ಗೋವಿಂದ ರಾಜು ತಿಳಿಸಿದ್ದಾರೆ.