ಮಡಿಕೇರಿ, ಡಿ.14 : ಕೊಡಗು ಕೃಷಿ ವಿಜ್ಞಾನಿಗಳ ವೇದಿಕೆಯು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಹಯೋಗ ದೊಂದಿಗೆ ಅತಿವೃಷ್ಟಿ ಕುರಿತು ಅಧ್ಯಯನ ನಡೆಸಿ ಭೂ ಕುಸಿತಕ್ಕೆ ಕಾರಣವಾದ ಕೆಲವು ಅಂಶಗಳನ್ನು ಗುರುತಿಸಿ ಪ್ರಕಟಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ವಿಜ್ಞಾನ ವೇದಿಕೆಯ ಅಧ್ಯಕ್ಷರಾದ ಕೆ.ಆರ್. ಬಾಬುರಾಘವನ್ ಹಾಗೂ ಇತರ ಪ್ರಮುಖರು, ಭೂ ಕುಸಿತದ ಕಾರಣಗಳ ಕುರಿತು ಮಾಹಿತಿ ನೀಡಿದರು. 2018 ಜುಲೈ 9 ರಂದು ಮಡಿಕೆÉೀರಿ ವಿಭಾಗದಲ್ಲಿ ಭೂ ಕಂಪನವಾಗಿತ್ತು. ಇದರ ತೀವ್ರತೆ 3.4 ಎಂದು ರಿಕ್ಟರ್ ಮಾಪಕದಲ್ಲಿ ಕಂಡು ಬಂದಿದೆ. ಭೂ ಕಂಪನವು ಒಂದು ತಿಂಗಳ ನಂತರ ನಡೆದ ಭೂ ಕುಸಿತಕ್ಕೆ ಕಾರಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಜೂನ್ನಿಂದ ಸೆಪ್ಟೆಂಬರ್ವರೆಗೆ 3463 ಮಿ.ಮೀ. ಮಳೆ ದಾಖಲಾಗಿದ್ದು, ಸಾಧಾರಣ ಮಳೆಗಿಂತ ಶೇ.59 ರಷ್ಟು ಹೆಚ್ಚಾಗಿದೆ. ಆಗಸ್ಟ್ 13 ರಿಂದ 19ರವರೆಗೆ ಸತತ ಏಳು ದಿನಗಳ ಕಾಲ ಜಿಲ್ಲೆಯಲ್ಲಿ 594.2ಮಿ.ಮೀ. ಮಳೆÉಯಾಗಿದ್ದು, ಇದು ಸಾಧಾರಣ ಮಳೆಗಿಂತ ಶೇ.272 ರಷ್ಟು ಹೆಚ್ಚಾಗಿದೆ. ಇದು ಕೂಡ ಭೂ ಕುಸಿತಕ್ಕೆ ಮೂಲ ಕಾರಣವೆಂದು ಹೇಳಬಹುದಾಗಿದೆ. ಇದರ ಪರಿಣಾಮವೆ ಆಗಸ್ಟ್ 15, 16 ಮತ್ತು 17 ರಂದು ಮುಕ್ಕೋಡ್ಲು, ಕಾಲೂರು, ಕಾಂಡನಕೊಲ್ಲಿ, ಅಂಜನಗೇರಿ ಬೆಟ್ಟಗೇರಿ, ಮಕ್ಕಂದೂರು, ಹೆಬ್ಬೆಟ್ಟಗೇರಿ, ಮೊಣ್ಣಂಗೇರಿ ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದೆ.
ಹಾರಂಗಿ ಜಲಾಶಯದಿಂದ ಒಳಹರಿವಿನ ಮಟ್ಟವನ್ನು ಮೊದಲೇ ಗಮನಿಸದೆ ಏಕಾಏಕಿ ನೀರನ್ನು ಹೊರಬಿಟ್ಟ ಪರಿಣಾಮವೂ ಮತ್ತು ಜಲಾಶಯದ ಹಿನ್ನೀರಿನ ಒತ್ತಡದಿಂದಲು ಭೂ ಕುಸಿತ ಉಂಟಾಗಿದೆ. ಬೆಟ್ಟ ಗುಡ್ಡಗಳ ಕಲ್ಲಿನ ರಚನೆಗಳಲ್ಲಿ ಉಂಟಾಗಿರುವ ಬಿರುಕುಗಳಿಂದಾಗಿ ಮಣ್ಣಿನ ಪ್ರದೇಶ ಸಡಿಲವಾಗಿದ್ದು, ತೇವಾಂಶ ಸಂಗ್ರಹಗೊಂಡು ಅಸ್ಥಿರತೆ ಉಲ್ಬಣಗೊಂಡಿದೆ.
(ಮೊದಲ ಪುಟದಿಂದ) ಇಂತಹ ಪ್ರದೇಶಗಳು ಸಡಿಲಗೊಂಡು ಸಣ್ಣ ಕಣಿವೆ ಪ್ರದೇಶಗಳಾಗಿ ಪರಿವರ್ತನೆಗೊಂಡು ಭೂ ಕುಸಿತ ಉಂಟಾಗಿದೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು.
ಭೂ ಕುಸಿತದಿಂದಾಗಿ ಅತಿವೃಷ್ಟಿ ಹಾನಿ ಪೀಡಿತ ಪ್ರದೇಶಗಳಲ್ಲಿ ಒಟ್ಟು 629.158 ಹೆಕ್ಟೇರ್ ಪ್ರದೇಶ ನಾಶವಾಗಿದೆ. ಅತಿಯಾದ ಮಳೆಯಿಂದ ಇಳಿಜಾರು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಹಾನಿ ಪ್ರದೇಶ ಪ್ರಮುಖವಾಗಿ ಮರಳು ಮಿಶ್ರಿತ ಮಣ್ಣ್ಣನ್ನು ಹೊಂದಿದೆ. ಇಳಿಜಾರು ಪ್ರದೇಶವನ್ನು ಗಟ್ಟಿ ಮಾಡುವದರಿಂದ ಮತ್ತು ಭೂ ಸವೆತವನ್ನು ತಡೆಗಟ್ಟುವದರಿಂದ ಮುಂದೆ ಎದುರಾಗಬಹುದಾದ ಅಪಾಯವನ್ನು ತಡೆಯಬಹುದಾಗಿದೆ. ಬೆಟ್ಟ ಪ್ರದೇಶ, ಇಳಿಜಾರು ಪ್ರದೇಶಗಳಲ್ಲಿ ಮರಗಳನ್ನು ಕಡಿಯುವದರಿಂದ ಮತ್ತು ಕೃಷಿ ಚಟುವಟಿಕೆ ಮಾಡುವದರಿಂದ ಭೂ ಕುಸಿತದ ವ್ಯಾಪ್ತಿ ಹೆಚ್ಚಾಗಬಹುದೆಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೆ ಉಂಟಾಗಿರುವ ಭೂಮಿಯ ಬಿರುಕುಗಳು ಮುಂದಿನ ಭೂ ಕುಸಿತಕ್ಕೆ ಎಡೆಮಾಡಿಕೊಟ್ಟಿದ್ದು, ಅಗತ್ಯ ಪರಿಹಾರ ಮಾರ್ಗಗಳನ್ನು ಅನುಸರಿಸುವ ಅಗತ್ಯತೆ ಇದೆಯೆಂದು ಬಾಬು ರಾಘವನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಭೂ ವಿಜ್ಞಾನಿ ಡಾ. ರವಿಕುಮಾರ್, ವೇದಿಕೆ ಉಪಾಧ್ಯಕ್ಷ ಸುಬ್ರಮಣ್ಯ, ಕಾರ್ಯದರ್ಶಿ ಡಾ. ಸತೀಶ್, ಪ್ರಮುಖರಾದ ಜಿ.ಎಂ. ದೇವಗಿರಿ ಹಾಗೂ ಶೋಭಾ ಉಪಸ್ಥಿತರಿದ್ದರು.