ಮಡಿಕೇರಿ, ಡಿ. 14: ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ರೈತರ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲೆಯ ಇಬ್ಬರು ಪ್ರಗತಿಪರ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದರು.

ಕೃಷಿ ಪಂಡಿತ ಪ್ರಶಸ್ತಿ ವಿಜೇತ ಕಗ್ಗೋಡ್ಲುವಿನ ಮಂದ್ರೀರ ತೇಜಸ್ ನಾಣಯ್ಯ ಅವರು ರೈತರು ಬೆಳೆಯುವ ಕಾಳುಮೆಣಸಿಗೆ ರೂ. 350 ರಿಂದ 500ರಷ್ಟು ಬೆಂಬಲ ಬೆಲೆ ನೀಡಬೇಕು. ರೈತರಿಗೆ ಯಂತ್ರ ನಾಟಿಗೆ ಎಕರೆಗೆ ರೂ. 4 ಸಾವಿರ ನೀಡುವಂತೆ ಕೈ ನಾಟಿ ಮಾಡುವವರಿಗೂ ಸಹಾಯಧನ ನೀಡುವಂತಾಗಬೇಕು. ಬಿ.ಕೆ.ಬಿ., ಬಿಳಿಯ, ಕರ್ತ ತಳಿಗಳಿಗೆ ಪ್ರೋತ್ಸಾಹ ನೀಡಬೇಕು. ಭತ್ತಕ್ಕೆ ಕನಿಷ್ಟ ರೂ. 2 ಸಾವಿರ ಬೆಂಬಲ ಬೆಲೆ ನೀಡಬೇಕು. ಭತ್ತ ಬೆಳೆಯುವದರಿಂದ ಅಂತರ್ಜಲ ವೃದ್ಧಿಯಾಗಿ ನೀರಿನ ಮಟ್ಟ ಏರಿಕೆಯಾಗಲಿದೆ. ಏಲಕ್ಕಿ ಬೆಳೆಗೆ ಎಕರೆಗೆ ರೂ. 25 ಸಾವಿರದಷ್ಟು ಸಹಾಯಧನ ನೀಡಬೇಕು. ಮೀನುಗಾರಿಕೆ ಇಲಾಖೆಯಿಂದ ಮೀನುಗಾರಿಕೆಗೆ ಒಂದು ಎಕರೆಗೆ ಮಾತ್ರ ರೂ. 54 ಸಾವಿರ ಸಹಾಯಧನ ನೀಡಲಾಗುತ್ತಿದ್ದು, ಇದನ್ನು ಅತಿ ಸಣ್ಣ ರೈತರಿಗೂ ವಿಸ್ತರಿಸಬೇಕು. ಮೀನು ಮರಿಗಳನ್ನು ಉಚಿತವಾಗಿ ನೀಡಬೇಕು. ವನ್ಯಪ್ರಾಣಿ ಹಾವಳಿ ತಡೆಗೆ ಅರಣ್ಯ ಇಲಾಖೆ ಮೂಲಕ ವರ್ಷಕ್ಕೆ 24 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅದರ ಬದಲಿಗೆ ಕಾಡಿನಲ್ಲಿ ಭೀಮಾ ಬಿದಿರು ಬೆಳೆದರೆ ಹಣ ಉಳಿಯಲಿದೆ. ಈ ಬಿದಿರು ದಿನಕ್ಕೆ ಒಂದೂವರೆ ಅಡಿಯಷ್ಟು ಬೆಳೆಯುತ್ತದೆ. ಹಲಸು ಹಾಗೂ ಮಾವು ಮಳೆಗಾಲದಲ್ಲಿ ಕೊಳೆತು ಹಾಳಾಗುವದರಿಂದ ಸರಕಾರ ಇವುಗಳ ಖರೀದಿ ಕೇಂದ್ರ ತೆರೆಯುವಂತಾಗಬೇಕೆಂದು ಸಲಹೆ ಮಾಡಿದರು. ಮತ್ತೋರ್ವ ರೈತ ಸೋಮೇಂಗಡ ಗಣೇಶ್ ತಿಮ್ಮಯ್ಯ ಕೂಡ ಹಲವಾರು ವಿಚಾರಗಳ ಬಗ್ಗೆ ಗಮನ ಸೆಳೆದರು.