ಹೆಬ್ಬಾಲೆ, ಡಿ. 14: ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು.

ಸೋಮವಾರಪೇಟೆ ತಾಲೂಕಿನ 20ಕ್ಕೂ ಹೆಚ್ಚಿನ ಸ್ತ್ರೀಶಕ್ತಿ ಗುಂಪುಗಳು ಈ ಮೇಳದಲ್ಲಿ ಪಾಲ್ಗೊಂಡು ತಾವು ತಯಾರಿಸಿದ್ದ ವಿವಿಧ ಬಗೆಯ ಉತ್ಪನ್ನಗಳನ್ನು ಪ್ರದರ್ಶನ ಮಾಡುವದರೊಂದಿಗೆ ಮಾರಾಟ ಮಾಡಿದರು. ಶ್ರೀ ಬನಶಂಕರಿ ದೇವಸ್ಥಾನದ ಬನದ ಆವರಣದಲ್ಲಿ ಆಯೋಜಿಸಿದ್ದ ಪ್ರದರ್ಶನ ಮಾರಾಟ ಮೇಳ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಪಂಚಾಯಿತಿ ಸದಸ್ಯ ಎನ್.ಎಸ್. ಜಯಣ್ಣ ಮಾತನಾಡಿ, ಮಹಿಳೆಯರು ಸ್ತ್ರೀಶಕ್ತಿ ಹಾಗೂ ಸ್ವ ಸಹಾಯ ಸಂಘಗಳಲ್ಲಿ ತೊಡಗಿಸಿಕೊಂಡು ತಮ್ಮ ಆದಾಯದ ಸ್ವಲ್ಪ ಹಣವನ್ನು ಉಳಿತಾಯ ಮಾಡುವ ಮೂಲಕ ಸಂಘಸಂಸ್ಥೆಗಳಲ್ಲಿ ಸಿಗುವ ಸಾಲ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸ್ತ್ರೀಶಕ್ತಿಗಳಲ್ಲಿ ಸದಸ್ಯರಾಗಿರುವ ಮಹಿಳೆಯರು ಸ್ವತಃ ತಾವೇ ಅನೇಕ ಪದಾರ್ಥಗಳನ್ನು ಉತ್ಪಾಧಿಸಿ ಮಾರಾಟ ಮೇಳಗಳಲ್ಲಿ ಮಾರಾಟ ಮಾಡುತ್ತಿರುವದು ಸ್ವಾವಲಂಭಿ ಬದುಕಿಗೆ ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶೀಲಾ ಮಾತನಾಡಿ, ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ ಮಹಿಳೆಯರು ತಾವು ತಯಾರಿಸಿದಂತಹ ಉತ್ಪನ್ನಗಳು ಮಾರಾಟವಾಗಬೇಕೆಂದರೆ ಅವುಗಳನ್ನು ಉತ್ಕೃಷ್ಟ ಮಟ್ಟದ ಬ್ರಾಂಡೆಡ್ ಆಗಿ ರೂಪಿಸಿದರೆ ಖಂಡಿತ ಯಶಸ್ಸು ಕಾಣಬಹುದು ಎಂದು ಹೇಳಿದರು.

ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ರಮೇಶ್ ಮಾತನಾಡಿ, ಸ್ತ್ರೀಶಕ್ತಿ ಒಕ್ಕೂಟಗಳು ರಚನೆಯಾದ ಮೇಲೆ ಮಹಿಳೆಯರು ಒಗ್ಗಟ್ಟಿನಿಂದ ತಮ್ಮ ಯಶಸ್ಸಿನ ಹಾದಿಯನ್ನು ಕಂಡುಕೊಂಡಿದ್ದಾರೆ. ಕೇವಲ ಆದಾಯ ಗಳಿಕೆಗೆ ಮಾತ್ರವೇ ಅಲ್ಲದೆ ಸಮಾಜಮುಖಿಯಾದ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವದು ಸಂತೋಷದಾಯಕವಾಗಿದೆ ಎಂದರು.

ಈ ಸಂದರ್ಭ ಹೆಬ್ಬಾಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪರಮೇಶ್, ಶಿರಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಡಿ. ಹರೀಶ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ರೆಹೆನಾ.

ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಮತಿ. ಉಪಾಧ್ಯಕ್ಷೆ ಯಶೋಧ, ಕಾರ್ಯದರ್ಶಿ ಹೆಚ್.ಎಂ. ಹೇಮಾ. ನಿರ್ದೇಶಕಿ ಲಲಿತಮ್ಮ ಉಪಸ್ಥಿತರಿದ್ದರು. ಸೋಮವಾರಪೇಟೆ ತಾಲೂಕಿನ 20ಕ್ಕೂ ಅಧಿಕ ಸ್ತ್ರೀಶಕ್ತಿ ಸಂಘಗಳ ಗುಂಪುಗಳು ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಪಾಲ್ಗೊಂಡಿದ್ದವು.