ಶನಿವಾರಸಂತೆ, ಡಿ. 14: ಸ್ಥಳೀಯ ಸುಪ್ರಜ ಗುರುಕುಲದಲ್ಲಿ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತುಗಳ ಮಾದರಿಗಳ ತಯಾರಿಕೆಯ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ವಿಜ್ಞಾನೋಪಕರಣಗಳ ಮಾದರಿಗಳನ್ನು ರಚಿಸಿಕೊಂಡು ಬಂದಿದ್ದರು. ವೀಕ್ಷಿಸಲು ಆಗಮಿಸಿದ್ದ ಪೋಷಕರಿಗೆ ಉತ್ಸಾಹದಿಂದ ವಿವರಣೆ ನೀಡಿ ರಂಜಿಸಿದರು. ಮುಂದಿನ ಶೈಕ್ಷಣಿಕ ವರ್ಷದಿಂದ ರೋಬೋ ಆಧಾರಿತ ಶಿಕ್ಷಣವನ್ನು, ಆಧುನಿಕ ಚಿಂತನೆಯ ವೈಜ್ಞಾನಿಕ ಮನೋಭಾವನೆಯನ್ನು ಮಕ್ಕಳಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಗುರುಕುಲದ ಪ್ರಾಂಶುಪಾಲರಾದ ಸುಜಲಾದೇವಿ ತಿಳಿಸಿದರು. ಗುರುಕುಲ ಆಡಳಿತ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್, ಸಹಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.