ಮಡಿಕೇರಿ, ಡಿ. 14 : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಜಲ ಪ್ರಳಯದಲ್ಲಿ ಸಂತ್ರಸ್ತರಾದವರಲ್ಲಿ ಸುಮಾರು 50 ಕುಟುಂಬಗಳಿಗೆ ತಲಾ ರೂ. 5 ಲಕ್ಷ ವೆಚ್ಚದಲ್ಲಿ ಅವರ ಜಾಗದಲ್ಲೇ ಮನೆ ನಿರ್ಮಿಸಿಕೊಡಲು ರೋಟರಿ ಸಂಸ್ಥೆ ನಿರ್ಧರಿಸಿದೆ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಪಿ.ರೋಹಿನಾಥ್ ತಿಳಿಸಿದರು.

ಮಡಿಕೆÉೀರಿ ರೋಟರಿ ಕ್ಲಬ್‍ಗೆ ಅಧಿಕೃತ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 25 ಮನೆಗಳ ನಿರ್ಮಾಣ ಕಾರ್ಯ ಜೂ.30ರ ಒಳಗೆ ಪೂರ್ಣಗೊಳ್ಳಲಿದೆ ಎಂದರು.

ಹೆಬಿಟೇಟ್ ಫಾರ್ ಹ್ಯೂಮ್ಯಾನಿಟಿ ಇಂಡಿಯಾ ಸಂಸ್ಥೆಯ ಮೂಲಕ ಸುಮಾರು 350 ಚದರ ಅಡಿಯ ವಿಸ್ತೀರ್ಣದಲ್ಲಿ ಮನೆಯನ್ನು ನಿರ್ಮಿಸುವ ಸಂಬಂಧ ಈಗಾಗಲೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಂಸ್ಥೆಯು ಭೂ ಕಂಪ ಪೀಡಿತ ಕಚ್ ಪ್ರದೇಶದಲ್ಲಿ ಭೂ ಕಂಪ ನಿರೋಧಕ ಮನೆಗಳನ್ನು ನಿರ್ಮಿಸಿದ ಅನುಭವವನ್ನು ಹೊಂದಿದ್ದು, ಕೊಡಗಿನಲ್ಲಿ ನಿರ್ಮಿಸುವ ಮನೆಗಳನ್ನು ಮುಂದೆ ವಿಸ್ತರಣೆ ಮಾಡಿಕೊಳ್ಳಲು ಅನುಕೂಲ ವಾಗುವಂತೆ ನಿರ್ಮಿಸಲಾಗುತ್ತದೆ.

ಆಶಾ ಸ್ಫೂರ್ತಿ ಯೋಜನೆ :

ರೋಟರಿ ಜಿಲ್ಲೆ 3181ಕ್ಕೆ ಒಳಪಡುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜ ನಗರವನ್ನು ಒಳಗೊಂಡ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ‘ಆಶಾ ಸ್ಫೂರ್ತಿ’ ಯೋಜನೆಯನ್ನು ಈ ಸಾಲಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಅದರಂತೆ ಸಣ್ಣ ಕ್ಲಬ್‍ಗಳು 5, ಮಧ್ಯಮ ಕ್ಲಬ್‍ಗಳು 8 ಹಾಗೂ ದೊಡ್ಡ ಕ್ಲಬ್‍ಗಳು 12 ಅಂಗನವಾಡಿಗಳನ್ನು ದತ್ತು ಸ್ವೀಕರಿಸಿ, ಮೂಲ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ರೋಹಿನಾಥ್ ತಿಳಿಸಿದರು.

ರೋಟರಿ ಜಿಲ್ಲೆ ವ್ಯಾಪ್ತಿಯಲ್ಲಿ 7600 ಅಂಗನವಾಡಿಗಳಿದ್ದು, ಕೊಡಗು ಜಿಲ್ಲೆಯಲ್ಲಿ 870 ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯ 75 ರೋಟರಿ ಸಂಸ್ಥೆಗಳು ಈಗಾಗಲೆ ನಿರೀಕ್ಷೆಗೂ ಮೀರಿ ಅಂಗನವಾಡಿಗಳನ್ನು ದತ್ತು ಪಡೆದು ಮೂಲ ಸೌಲಭ್ಯ ಕಲ್ಪಿಸುವಲ್ಲಿ ಕಾರ್ಯಪ್ರವೃತ್ತವಾಗಿವೆ. ಮಡಿಕೆÉೀರಿ ರೋಟರಿ ಸಂಸ್ಥೆಯು ಈಗಾಗಲೆ ನಾಲ್ಕು ಅಂಗನವಾಡಿಗಳಿಗೆ ಮೂಲ ಸೌಲಭ್ಯ ಕಲ್ಪಿಸಿದ್ದು, ಇನ್ನೂ ನಾಲ್ಕು ಕೇಂದ್ರಗಳನ್ನು ದತ್ತು ಸ್ವೀಕರಿಸಲಿದೆ ಎಂದರು.

ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರು ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಆಫ್ರಿಕಾದ ನೈಜೀರಿಯಾ ದೇಶಗಳಲ್ಲಿ ಕಳೆದ ಒಂದು ವರ್ಷದಲ್ಲಿ 27 ಪೋಲಿಯೋ ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಭಾರತದಲ್ಲಿ 2011ರಲ್ಲಿ ಕೊಲ್ಕತ್ತಾದ ಹೌರಾದಲ್ಲಿ ಕೊನೆಯ ಪೋಲಿಯೋ ಪ್ರಕರಣ ಪತ್ತೆಯಾಗಿತ್ತು. ಆನಂತರದ ವರ್ಷಗಳಲ್ಲಿ ಯಾವದೇ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಿದ್ದರು, ಪಲ್ಸ್ ಪೋಲಿಯೋ ಕಾರ್ಯಕ್ರಮ ಮುಂದುವರಿಸಬೇಕೆ ಎನ್ನುವ ಜಿಜ್ಞಾಸೆ ನಮ್ಮಲ್ಲಿತ್ತು. ಆದರೆ, ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮತ್ತು ಪೋಲಿಯೋ ವೈರಸ್‍ಗಳು ಅತೀ ಶೀಘ್ರವಾಗಿ ಹರಡುವ ಸಾಧ್ಯತೆಗಳು ಇರುವದರಿಂದ ದೇಶದಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ ಮುಂದುವರಿಸಲಾಗುತ್ತದೆ ಎಂದು ರೋಹಿನಾಥ್ ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ರೋಟರಿ ಪದಾಧಿಕಾರಿಗಳೊಂದಿಗೆ ನಗರದ ಕೆಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಸವಲತ್ತು ವಿತರಿಸಿದ ಪದಾಧಿಕಾರಿಗಳು, ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರಿಗೆ ನೆರವಿನ ಚೆಕ್ ಹಸ್ತಾಂತರಿಸಿದರು.

ಸುದ್ದಿಗೊಷ್ಠಿಯಲ್ಲಿ ಮಡಿಕೇರಿ ರೋಟರಿ ಸಂಸ್ಥೆ ಅಧ್ಯಕ್ಷ ಮೇಜರ್ ಓ.ಎಸ್. ಚಿಂಗಪ್ಪ, ಕಾರ್ಯದರ್ಶಿ ಮೃಣಾಲಿನಿ ಚಿಣ್ಣಪ್ಪ, ವಲಯ 6ರ ಅಧ್ಯಕ್ಷ ಧರ್ಮಾಪುರ ನಾರಾಯಣ, ಕಾರ್ಯದರ್ಶಿ ಕ್ರಿಜ್ವಲ್ ಕೋಟ್ಸ್ ಹಾಗೂ ಜೋನಲ್ ಲೆಫ್ಟಿನೆಂಟ್ ಎಂ.ಪಿ. ಚೀಯಣ್ಣ ಉಪಸ್ಥಿತರಿದ್ದರು.