ಕುಶಾಲನಗರ, ಡಿ. 14: ತಂಬಾಕು ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಪಟ್ಟಣ ವ್ಯಾಪ್ತಿಯ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಕೋಟ್ಪಾ ಕಾಯ್ದೆ ಅನ್ವಯ ತಂಬಾಕು ಮಾರಾಟ ಮತ್ತು ಸೇವನೆಗೆ ಪ್ರಚೋದನೆ ನಿಷಿದ್ದವಾಗಿದ್ದು ತಂಬಾಕು ನಿಯಂತ್ರಣ ಅಭಿಯಾನ ಮೂಲಕ ಮಾರಾಟಗಾರರಲ್ಲಿ ಜಾಗೃತಿ ಮೂಡಿಸಲಾಯಿತು. ನಿಯಮ ಮೀರಿ ಮಾರಾಟ ಮತ್ತು ಬಹಿರಂಗವಾಗಿ ಫಲಕ ಪ್ರದರ್ಶನ ಮಾಡುವ ಅಂಗಡಿ ಮಾಲೀಕರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಯಿತು.

ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಯೂ ಆದ ತಂಬಾಕು ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್ ಮತ್ತು ತಾಲೂಕು ವೈದ್ಯಾಧಿಕಾರಿ ರವಿಕುಮಾರ್ ನೇತೃತ್ವದ ತಂಡ ಪೊಲೀಸ್ ಸಿಬ್ಬಂದಿಗಳೊಂದಿಗೆ ಅಂಗಡಿ ಮುಂಗಟ್ಟುಗಳನ್ನು ಪರಿಶೀಲಿಸಿ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಡಾ.ಶಿವಕುಮಾರ್ ಮಾಹಿತಿ ನೀಡಿದರು. ತಂಡದಲ್ಲಿ ಆರೋಗ್ಯ ಸಲಹೆಗಾರರಾದ ಮಂಜುನಾಥ್, ಪುನೀತ ರಾಣಿ, ಆರ್.ಮಂಜುನಾಥ್, ಆರೋಗ್ಯ ಕಾರ್ಯಕರ್ತರಾದ ಮಹೇಶ್, ಮುಖೇಶ್ ಇದ್ದರು.