ಮಡಿಕೇರಿ, ಡಿ.14 : ಮಡಿಕೇರಿ ನಗರಸಭೆಗೆ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಗೆಲವಿಗೆ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವುಮಾದಪ್ಪ ಕರೆ ನೀಡಿದ್ದಾರೆ.
ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನಗರಸಭಾ ಚುನಾವಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರಸಭೆ ಕರಡು ಪ್ರತಿಯಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಲು 20 ದಿನಗಳ ಕಾಲಾವಕಾಶದ ಅಗತ್ಯವಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದರೆ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾóಕ್ ಮಾತನಾಡಿ, ಕರಡು ಪ್ರತಿಗಳಲ್ಲಿ ಗೊಂದಲಗಳಿರುವದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುವ ನಗರ ಕಾಂಗ್ರೆಸ್ ಸಮಿತಿ ಈಗಾಗಲೇ ಆಕ್ಷೇಪಣೆಯನ್ನು ಸಲ್ಲಿಸಿರುವದಾಗಿ ತಿಳಿಸಿದರು.
ಕಾರ್ಯಕರ್ತರು ಶಿಸ್ತು ಮತ್ತು ಪಕ್ಷಾಭಿಮಾನದಿಂದ ಒಗ್ಗಟ್ಟಾಗಿ ದುಡಿದರೆ ಮಾತ್ರ ನಗರಸಭೆಯಲ್ಲಿ ಅಧಿಕಾರ ಗಳಿಸಲು ಸಾಧ್ಯವೆಂದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರಾ ಮೈನಾ ಅವರುಗಳು ಮಾತನಾಡಿ ಎಲ್ಲಾ 23 ವಾರ್ಡ್‍ಗಳಲ್ಲಿ ಗೊಂದಲಗಳಿರುವದರಿಂದ ಕರಡು ಪ್ರತಿಯ ತಿದ್ದುಪಡಿಗೆ ಕನಿಷ್ಟ 30 ದಿನಗಳ ಕಾಲಾವಕಾಶಬೇಕೆಂದು ಹೇಳಿದರು.
ಹೈ-ಕಮಾಂಡ್ ಸೂಚಿಸುವ ಅಭ್ಯರ್ಥಿಗಳ ಗೆಲವಿಗೆ ಪ್ರತಿಯೊಬ್ಬರು ಪಣ ತೊಡಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರುಗಳಾದ ಚುಮ್ಮಿದೇವಯ್ಯ, ನಂದಕುಮಾರ್, ಪ್ರಕಾಶ್, ಜುಲೆಕಾಬಿ, ತಜಸುಂ, ಉದಯ ಕುಮಾರ್, ಗಿಲ್ಬರ್ಟ್ ಲೋಬೋ, ವೆಂಕಟೇಶ್, ಮಡಿಕೇರಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಇ.ಮ್ಯಾಥ್ಯು, ನಗರ ಕಾಂಗ್ರೆಸ್ ಉಪಾಧ್ಯಕ್ಷ ಜಪ್ರುಲ್ಲಾ, ಶಶಿ, ಮಡಿಕೇರಿ ಮಹಿಳಾ ಘಟಕದ ನಗರಾಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಸ್ವರ್ಣಲತಾ ಹಾಗೂ ಎಲ್ಲಾ 23 ಬೂತ್‍ಗಳ ಅಧ್ಯಕ್ಷರು, ಸದಸ್ಯರು ಹಾಗೂ ಮಡಿಕೇರಿ ನಗರದ ಎಲ್ಲಾ ಕಾರ್ಯಕರ್ತರು ಹಾಜರಿದ್ದರು. ಆರ್.ಪಿ. ಚಂದ್ರಶೇಖರ್ ಸ್ವಾಗತಿಸಿ, ವಂದಿಸಿದರು.
ಶಕ್ತಿ ಸಮಿತಿ ರಚನೆ : ಇಂದಿರಾ ಮಹಿಳಾ ಶಕ್ತಿ ಸಮಿತಿಯ ನೂತನ ಅಧ್ಯಕ್ಷರಾಗಿ ಶಶಿ, ಉಪಾಧ್ಯಕ್ಷರಾಗಿ ಮಂಜುಳಾ ಮಂಜು, ಆಶಾ, ಪ್ರೇಮಾಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಫಿಲೋಮಿನ, ಮುಮ್ತಾಜ್ ಬೇಗಂ, ಪಿ.ಸಿ. ಉದಯ ಚಂದ್ರಿಕ, ಖಜಾಂಚಿ ಸೌಭಾಗ್ಯ, ಸಹಕಾರ್ಯದರ್ಶಿ ಸಫಿಯಾ, ತಾರ, ಗೌರವ ಸಲಹೆಗಾರರಾಗಿ ಜುಲೆಕಾಬಿ, ತಜಸುಂ, ಸ್ವರ್ಣಲತ ಹಾಗೂ 25 ಮಹಿಳೆಯರು ಸದಸ್ಯರಾಗಿ ಆಯ್ಕೆಯಾದರು.